×
Ad

ಗಡಿ ಬಿಕ್ಕಟ್ಟು: ಸಂಧಾನಕ್ಕೆ ಅವಕಾಶವಿಲ್ಲ; ಚೀನಾ ಸ್ಪಷ್ಟನೆ

Update: 2017-07-16 19:15 IST

ಬೀಜಿಂಗ್, ಜು. 16: ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆ ನಡೆಸಲು ಯಾವುದೇ ಅವಕಾಶವಿಲ್ಲ ಹಾಗೂ ಇದಕ್ಕಿರುವ ಏಕೈಕ ಪರಿಹಾರವೆಂದರೆ ಡೋಂಗ್ಲಂಗ್ ಅಥವಾ ದೋಕ್ಲಮ್ ವಲಯದಿಂದ ಭಾರತೀಯ ಸೇನೆ ಹಿಂದೆ ಸರಿಯುವುದು ಎಂದು ಚೀನಾ ಶನಿವಾರ ಹೇಳಿದೆ.

ಭಾರತವು ತನ್ನ ಗಡಿ ಸೈನಿಕರನ್ನು ತನ್ನದೇ ಭಾಗಕ್ಕೆ ಕರೆಸಿಕೊಳ್ಳದಿದ್ದರೆ ಅದು ‘ಪೇಚಿಗೆ’ ಸಿಲುಕಿಕೊಳ್ಳಲಿದೆ ಹಾಗೂ ಪರಿಸ್ಥಿತಿ ‘ಬಿಗಡಾಯಿಸಬಹುದು’ ಎಂದು ಶನಿವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ಹೇಳಿದೆ.

‘‘ಈ ಘಟನೆಯಲ್ಲಿ ಮಾತುಕತೆಗಳಿಗೆ ಅವಕಾಶವಿಲ್ಲ ಹಾಗೂ ಭಾರತ ತನ್ನ ಸೇನೆಯನ್ನು ಡೋಕ್ಲಮ್‌ನಿಂದ ಹಿಂದಕ್ಕೆ ಪಡೆದುಕೊಳ್ಳಬೇಕು ಎಂಬುದಾಗಿ ಚೀನಾ ಸ್ಪಷ್ಟಪಡಿಸಿದೆ. ಚೀನಾಕ್ಕೆ ಗಡಿ ರೇಖೆಯೇ ಮುಖ್ಯ’’ ಎಂದು ಹೇಳಿಕೆ ತಿಳಿಸಿದೆ.

ದೋಕ್ಲಮ್ ಬಿಕ್ಕಟ್ಟು ಪರಿಹಾರ ಮಾತುಕತೆಗೆ ಅವಕಾಶವಿಲ್ಲ ಎಂದು ಚೀನಾ ತನ್ನ ಅಧಿಕೃತ ಮಾಧ್ಯಮದ ಮುಖಾಂತರ ಹೇಳಿರುವುದು ಇದೇ ಮೊದಲ ಬಾರಿಯಾಗಿದೆ. ದೋಕ್ಲಮ್ ಚೀನಾದ ನಿಯಂತ್ರಣದಲ್ಲಿದೆ, ಆದರೆ ಅದು ತನ್ನದೆಂದು ಭೂತಾನ್ ಹೇಳಿಕೊಳ್ಳುತ್ತಿದೆ.

ಬಿಕ್ಕಟ್ಟು ಪರಿಹಾರ ಮಾತುಕತೆಗೆ ಭಾರತ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಪೂರ್ವಶರತ್ತಾಗಿದೆ ಎಂದು ಈವರೆಗೆ ಚೀನಾದ ವಿದೇಶ ಸಚಿವಾಲಯ ಹೇಳಿಕೊಂಡುಬರುತ್ತಿತ್ತು.

  ‘‘ತನ್ನ ಸೈನಿಕರನ್ನು ದೋಕ್ಲಮ್ ಪ್ರದೇಶದಿಂದ ತನ್ನದೇ ನೆಲಕ್ಕೆ ವಾಪಸ್ ಕರೆಸಿಕೊಳ್ಳಬೇಕೆಂಬ ಚೀನಾದ ಕರೆಗಳನ್ನು ಭಾರತ ಪದೇ ಪದೇ ನಿರ್ಲಕ್ಷಿಸಿದೆ. ಆದರೆ, ಇದು ಬಿಕ್ಕಟ್ಟನ್ನು ಉಲ್ಬಣಿಸಲಿದೆ ಹಾಗೂ ಭಾರತ ಮುಖಭಂಗಕ್ಕೆ ಒಳಗಾಗಬೇಕಾಗುತ್ತದೆ’’ ಎಂದು ಕ್ಸಿನುವ ಅಭಿಪ್ರಾಯಪಟ್ಟಿದೆ.

ವಿವಾದಕ್ಕೆ ಲಡಾಖನ್ನು ಎಳೆತರುವ ಪ್ರಯತ್ನ!

ವಿವಾದದಲ್ಲಿ ಲಡಾಖ್ ವಲಯವನ್ನು ಎಳೆದು ತಂದು ಅದಕ್ಕೆ ಪಾಕಿಸ್ತಾನದೊಂದಿಗೆ ನಂಟು ಕಲ್ಪಿಸುವ ಮೂಲಕ ವಿವಾದಕ್ಕೆ ಇನ್ನೊಂದು ಆಯಾಮವನ್ನು ಸೇರಿಸಲು ಸೇರಿಸಲು ಕ್ಸಿನುವಾ ಹೇಳಿಕೆ ಬಯಸಿದೆ.

‘‘ಆಗ್ನೇಯ ಕಾಶ್ಮೀರದಲ್ಲಿರುವ ಭಾರತ, ಪಾಕಿಸ್ತಾನ ಮತ್ತು ಚೀನಾಗಳ ನಡುವಿನ ವಿವಾದಿತ ಪ್ರದೇಶ ಲಡಾಖ್ ಸಮೀಪ 2013 ಮತ್ತು 2014ರಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟುಗಳಂತೆ ದೋಕ್ಲಮ್ ಬಿಕ್ಕಟ್ಟು ಕೂಡ ಒಂದು ಎಂಬುದಾಗಿ ಭಾರತ ಪರಿಗಣಿಸಬಾರದು. ಆ ಪ್ರಕರಣಗಳಲ್ಲಿ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಸೈನಿಕರ ನಡುವಿನ ಸಂಘರ್ಷ ತಾರ್ಕಿಕ ಅಂತ್ಯವೊಂದನ್ನು ಕಂಡಿತು. ಆದರೆ, ಈ ಬಾರಿ ಇದು ಸಂಪೂರ್ಣ ಭಿನ್ನ ಪ್ರಕರಣವಾಗಿದೆ’’ ಎಂದಿತು.

ಲಡಾಖನ್ನು ‘ವಿವಾದಿತ’ ಪ್ರದೇಶ ಎಂಬುದಾಗಿ ಕರೆಯುವುದು ಹಾಗೂ ಕಾಶ್ಮೀರವನ್ನು ಪ್ರಸ್ತಾಪಿಸುವುದು ಚೀನಾ ಅಪರೂಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News