×
Ad

‘ಬೆಡಿ ಕಂಬಳನ ಬೆನ್ನಿ ಕಂಬಳನ ಬೋಡಾಯಿನಿ?

Update: 2017-07-16 19:19 IST

ಮಂಗಳೂರು, ಜು. 16: ‘ಬೆಡಿ ಕಂಬಳನ ಬೆನ್ನಿ ಕಂಬಳನ ಬೋಡಾಯಿನಿ’ (ಡಾಮ್ ಡೂಮ್ ಕಂಬಳವೇ ಬೇಸಾಯ ಕಂಬಳವೇ ಬೇಕಾದ್ದು) ಎಂಬ ವಿಷಯವಾಗಿ ಶನಿವಾರ ನಗರದ ಡಾನ್ ಬಾಸ್ಕೋ ಮಿನಿ ಹಾಲ್‌ನಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರ ಆಯೋಜಿಸಿತ್ತು.

ಸಂಚಾಲಕ ಪೇರೂರು ಜಾರು ಮಾತನಾಡಿ, ಎಲ್ಲ ಊರುಗಳಲ್ಲಿ ಕಂಬಳ ಗದ್ದೆಗಳು ಇಂದಿಗೂ ಕಂಡುಬರುತ್ತವೆ. ಶತಮಾನದ ಹಿಂದೆ ಇವು ಒಂದೊಂದಾಗಿ ನಿಂತು ಹೋಗಿವೆ. ಬೇಸಾಯದ ಉದ್ದೇಶದ ಕಂಬಳವು ಗತ್ತು ತೋರಿಕೆಯ ಕಂಬಳವಾಗಿ ಬದಲಾದದ್ದೇ ಇದಕ್ಕೆ ಕಾರಣ ಎಂದರು.

ದೀಪಾವಳಿಯ ಬಳಿಕ ಜಾರ್ದೆ ತಿಂಗಳಿನಲ್ಲಿ ಸುಗ್ಗಿಗೆ ಗದ್ದೆ ಹದ ಮಾಡುವಾಗ ಊರವರೆಲ್ಲ ಸೇರಿ ಕಂಬಳ ನಡೆಸುತ್ತಿದ್ದರು. ಆಗ ತುಳುನಾಡಿನಲ್ಲಿ ಎಮ್ಮೆ ಕೋಣ ಮಾಮೂಲಾದ್ದರಿಂದ ಎಳೆಯ ಕೋಣಗಳು ಓಡಿಸಲು ಸಾಕಷ್ಟು ಊರಲ್ಲೇ ಸಿಗುತ್ತಿತ್ತು. ಉಳುವ ಕೋಣಗಳನ್ನೂ ಓಡಿಸಿದ್ದು ಕಂಡು ಬರುತ್ತದೆ. ಆದರೆ ಹತ್ತೂರು ಹೇಳಿಕೆಯ ಅರಸು ಕಂಬಳ, ಗುತ್ತು ಕಂಬಳಗಳು ಹೆಚ್ಚಾದ ಮೇಲೆ ಕಂಬಳವು ಬೇಸಾಯದ ಸಂಬಂಧ ಕಡಿದುಕೊಂಡು ಆಡಂಬರಕ್ಕೆ ವಾಲಿತು. ಜೂಜು ಅತಿಯಾಯಿತು, ಕೋಣ ಸಾಕುವುದರಲ್ಲಿ ಜಿದ್ದು ಕಂಡು ಬಂತು. ಓಟದಲ್ಲಿ ಮೋಸಗಳೂ ಸೇರಿದಂತೆ ಕಾಣುತ್ತದೆ. ಅಲ್ಲಿಗೆ ಕಂಬಳಕ್ಕೂ ಬೇಸಾಯಕ್ಕೂ ಅಂದರೆ ಸಾಮಾನ್ಯ ರೈತನಿಗೂ ಇದ್ದ ಸಂಬಂಧ ಇಲ್ಲವಾಯಿತು. ಈಗ ನಮಗೆ ಯಾವ ಕಂಬಳ ಬೇಕು ಎಂದು ಆಲೋಚಿಸಬೇಕಾದ ಕಾಲಘಟ್ಟದಲ್ಲಿ ನಾವಿಂದು ಇದ್ದೇವೆ ಎಂದು ಅವರು ಹೇಳಿದರು.

ಜಿ. ಎಂ. ಶೆಟ್ಟಿ, ಪ್ರವೀಣ್ ಶೆಟ್ಟಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News