ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ
ಮಂಗಳೂರು, ಜು. 16: ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್‌ಇಂಡಿಯಾ ವಿಮಾನವು ಇಳಿಯುತ್ತಿದ್ದ ಸಂದರ್ಭದಲ್ಲಿ ರನ್‌ವೇಯಲ್ಲಿ ಅಳವಡಿಸಿದ್ದ ಮಾರ್ಗದರ್ಶಿ ದೀಪಕ್ಕೆ ಢಿಕ್ಕಿ ಹೊಡೆದ ಘಟನೆ ರವಿವಾರ ಬೆಳಗ್ಗಿನ ಜಾವ ಸಂಭವಿಸಿದೆ. ಘಟನೆಯಲ್ಲಿ ಏರ್ ಇಂಡಿಯಾ ವಿಮಾನದಲ್ಲಿದ್ದ 186 ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಏರ್‌ಇಂಡಿಯಾ 814 ವಿಮಾನವು ಇಂದು ಮುಂಜಾನೆ ದುಬೈನಿಂದ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿತ್ತು. 186 ಮಂದಿ ಪ್ರಯಾಣಿಕರನ್ನು ಹೊತ್ತ ವಿಮಾನವು ರನ್‌ವೇನಲ್ಲಿ ಇಳಿಯುತ್ತಿದ್ದಂತೆ ಅಲ್ಲಿ ಅಳವಡಿಸಲಾಗಿದ್ದ ಗೈಡಿಂಗ್ ಲೈಟ್‌ಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪ್ರಯಾಣಿಕರು ಕೆಲವು ಕಾಲ ಭೀತಿಗೊಳಗಾಗಿದ್ದರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ವಿಮಾನಕ್ಕೂ ಯಾವುದೇ ಹಾನಿಯಾಗಿಲ್ಲ.
ಪ್ರಯಾಣಿಕರು ಇಳಿದು ವಿಮಾನ ತೆರಳಿದ ಬಳಿಕ ಈ ವಿಚಾರ ಗಮನಕ್ಕೆ ಬಂದಿದೆ. ಗೈಡಿಂಗ್ ದೀಪಕ್ಕೆ ಹಾನಿಯಾಗಿದ್ದು, ಹೊಸ ದೀಪವನ್ನು ಅಳವಡಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಈ ಬಗ್ಗೆ ಏರ್‌ಇಂಡಿಯಾದ ಸುರಕ್ಷತಾ ವಿಭಾಗವು ಪ್ರಾಥಮಿಕ ತನಿಖೆಯನ್ನು ನಡೆಸಿದ್ದು, ಮೇಲ್ನೋಟಕ್ಕೆ ವಿಮಾನ ಇಳಿಯುವಾಗ ಘಟನೆ ನಡೆದಿರುವುದು ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಯ ಕುರಿತು ವಿಮಾನಯಾನ ನಿರ್ದೇಶನಾಲಯವು ಆಂತರಿಕ ತನಿಖೆಗೆ ಆದೇಶಿಸಿದೆ ಎಂದು ತಿಳಿದು ಬಂದಿದೆ.