ಬುದ್ಧಿವಂತರು ನೇತ್ರದಾನದ ಮೂಲಕ ಹೃದಯವಂತರಾಗಿ: ಡಾ.ಎಂ.ಆರ್.ರವಿ
ಮೂಡುಬಿದಿರೆ, ಜು.16: ಕರಾವಳಿಯ ಜನರು ವಿದ್ಯೆಯನ್ನು ಪಡೆದಿರುವ ಪ್ರಜ್ಞಾವಂತರು. ಜಾಗೃತ ಮನೋಭಾವ, ವಿವೇಚನ ಶಕ್ತಿಯನ್ನು ಬಳಸಿ ತಮ್ಮ ಹಕ್ಕು ಕರ್ತವ್ಯವನ್ನು ನಿಭಾಯಿಸುವವರು. ಸಹಬಾಳ್ವೆ, ಬಹು ಸಂಸ್ಕೃತಿ, ಭಾಷೆ, ಜಾತಿಯೊಂದಿಗೆ ಬುದ್ಧಿವಂತರೆಂದು ಗುರುತಿಸಿಕೊಂಡಿರುವ ತಾವು ನೇತ್ರದಾನ ಮಾಡುವ ಮೂಲಕ ಹೃದಯವಂತರಾಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ದ.ಕ ಜಿಲ್ಲಾ ಪಂಚಾಯತ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ ‘ನೇತ್ರದಾನ-ಒತ್ತಡ ನಿರ್ವಹಣೆ’ ಕುರಿತ ಮಾಹಿತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ದಾನಗಳಲ್ಲಿ ಶ್ರೇಷ್ಠವಾಗಿರುವ ದಾನ ನೇತ್ರದಾನ. ನಾವು ಬದುಕಿರುವಾಗ ರಕ್ತದಾನವನ್ನು ಮಾಡಲು ಮಾತ್ರ ಸಾಧ್ಯವಿದೆ. ಆದರೆ ನಾವು ಸತ್ತ ಮೇಲೆ ಇನ್ನೊಂದು ಜೀವಕ್ಕೆ ದೃಷ್ಟಿಯನ್ನು ದಾನ ನೀಡುವಂತಹ ಉತ್ತಮ ಕೆಲಸವನ್ನು ಬದುಕಿರುವಾಗಲೇ ತೀರ್ಮಾನ ತೆಗೆದುಕೊಳ್ಳುವ ಹಕ್ಕು ನಮಗಿದೆ. ಸ್ವಾರ್ಥ,ದುರಾಲೋಚನೆಯನ್ನು ಬಿಟ್ಟು ಬೇರೆಯವರ ಬಗ್ಗೆ ಯೋಚನೆ ಯೋಜನೆಯನ್ನು ಹಾಕಿಕೊಳ್ಳುವುದರ ಜೊತೆಗೆ ಮಾನವೀಯತೆಯನ್ನು ನಾವು ಬೇಳೆಸಿಕೊಳ್ಳಬೇಕೆಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಣ್ಣು, ಕಿವಿ, ಬಾಯಿಗೆ ಸಂಸ್ಕಾರವನ್ನು ನೀಡುವಂತಹ ಉತ್ತಮ ಕೆಲಸಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಪ್ರಜ್ಞಾವಂತ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಿ ಎಂದರು.
ಜಿಲ್ಲಾ ಕುಷ್ಠರೋಗ, ಅಂಧತ್ವ ನಿಯಂತ್ರಣ, ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ.ರತ್ನಾಕರ್, ಮಂಗಳೂರು ಶ್ರೀನಿವಾಸ ಮೆಡಿಕಲ್ ಕಾಲೇಜಿನ ಮನೋರೋಗ ತಜ್ಞೆ ಡಾ.ಕೆರೋಲಿನ್, ಪ್ರಭಾರ ಡಿ.ಹೆಚ್.ಒ ಡಾ. ಪಾಷಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕ ಚಂದ್ರಶೇಖರ ಗೌಡ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಯೋಗೀಶ್ ಕೈರೋಡಿ ಸ್ವಾಗತಿಸಿದರು.