×
Ad

ಗೋರಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಪ್ರಧಾನಿ ಮೋದಿ ಖಡಕ್ ಸೂಚನೆ

Update: 2017-07-16 20:17 IST

ಹೊಸದಿಲ್ಲಿ,ಜು.16: ಗೋರಕ್ಷಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ರಾಜ್ಯ ಸರಕಾರಗಳಿಗೆ ಖಡಕ್ ಸೂಚನೆ ಯನ್ನು ನೀಡಿದ್ದಾರೆ. ಇದೇ ವೇಳೆ ಗೋರಕ್ಷಣೆಯ ಹೆಸರಿನಲ್ಲಿ ಕೋಮು ಹಿಂಸೆಯನ್ನು ತಡೆಯಲು ಪ್ರತಿಪಕ್ಷಗಳ ಬೆಂಬಲವನ್ನು ಅವರು ಕೋರಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭದ ಮುನ್ನಾದಿನ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಕ್ಕೆ ರಾಜಕೀಯ ಅಥವಾ ಕೋಮುಬಣ್ಣ ನೀಡುವದರ ವಿರುದ್ಧ ಎಚ್ಚರಿಕೆಯನ್ನು ಸಾರಿದರು.

ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಇತ್ತೀಚಿನ ಹಲವಾರು ಘಟನೆಗಳ ಕುರಿತು ಸರಕಾರವನ್ನು ಹಣಿಯಲು ಪ್ರತಿಪಕ್ಷಗಳು ಸಜ್ಜಾಗಿರುವುದರಿಂದ ಮೋದಿಯವರ ಈ ಹೇಳಿಕೆಗಳು ಮಹತ್ವವನ್ನು ಪಡೆದುಕೊಂಡಿವೆ.

 ಗೋವನ್ನು ಮಾತೆಯೆಂದು ಆರಾಧಿಸುವ ಹಿಂದುಗಳ ನಂಬಿಕೆಗೆ ಪ್ರಧಾನಿಯವರು ಒತ್ತು ನೀಡಿದರಾದರೂ, ಇದು ಜನರು ಕಾನೂನನ್ನು ತಮ್ಮ ಕೈಗಳಲ್ಲಿ ತೆಗೆದುಕೊಳ್ಳಲು ಅವಕಾಶವಾಗಬಾರದು ಮತ್ತು ಪ್ರತಿಯೊಂದೂ ರಾಜ್ಯ ಸರಕಾರವು ಕಾನೂನು ಉಲ್ಲಂಘನೆಯ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದ್ದಾಗಿ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಹೆಚ್ಚಾಗಿ ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿಕೊಳ್ಳುವ ಗೋರಕ್ಷಣೆ ಸಂಬಂಧಿತ ಹಿಂಸಾಚಾರದ ಹಲವಾರು ಪ್ರಕರಣಗಳ ಕುರಿತು ಪ್ರತಿಪಕ್ಷಗಳು ಬಿಜೆಪಿಯ ವಿರುದ್ಧ ದಾಳಿ ನಡೆಸಿವೆ.

ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯನ್ನೂ ಉಲ್ಲೇಖಿಸಿದ ಮೋದಿ, ಅಭ್ಯರ್ಥಿಯ ಬಗ್ಗೆ ಒಮ್ಮತ ಮೂಡಿದ್ದಿದ್ದರೆ ಅತ್ಯುತ್ತಮವಾಗಿರುತ್ತಿತ್ತು ಎಂದರು.

ಉಭಯ ಪಕ್ಷಗಳು ರಾಷ್ಟ್ರಪತಿ ಚುನಾವಣೆಯ ಪ್ರಚಾರದ ವೇಳೆ ಅತ್ಯುನ್ನತ ಮಟ್ಟದ ಘನತೆಯನ್ನು ಕಾಯ್ದುಕೊಂಡಿವೆ ಮತ್ತು ಯಾವುದೇ ಕೆಟ್ಟ ಭಾಷೆಯ ಬಳಕೆಯಾಗಿಲ್ಲ ಎಂದು ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಟಿಎಂಸಿ ನಾಯಕರು ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ ವಿರುದ್ಧದ ಇತ್ತೀಚಿನ ಪ್ರಕರಣಗಳನ್ನು ಪರೋಕ್ಷವಾಗಿ ಬೆಟ್ಟು ಮಾಡಿದ ಮೋದಿ, ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ರಕ್ಷಿಸಬಾರದು. ಇದರಿಂದಾಗಿಯೇ ರಾಜಕಾರಣಿ ಗಳ ವರ್ಚಸ್ಸಿಗೆ ಹಾನಿಯಾಗುತ್ತದೆ ಎಂದರು.

ಆ.9ರಂದು ಚಲೇಜಾವ್ ಚಳವಳಿಗೆ 75 ವರ್ಷಗಳು ತುಂಬುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಈ ಸಂದರ್ಭವನ್ನು ಆಚರಿಸಬೇಕು ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News