ಜುಲೈ 17 ರಿಂದ 21ರ ವರೆಗೆ ಆಳ್ವಾಸ್‍ನಲ್ಲಿ `ಧಾಂ ಧೂಂ ಸುಂಟರಗಾಳಿ'
ಮೂಡುಬಿದಿರೆ, ಜು.16: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಆಶ್ರಯದಲ್ಲಿ ಜುಲೈ 17 ರಿಂದ 21ರ ವರೆಗೆ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ, ಸಾಯಂಕಾಲ 6.45 ಕ್ಕೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕಲಾವಿದರಿಂದ ಧಾಂ ಧೂಂ ಸುಂಟರಗಾಳಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಖ್ಯಾತ ರಂಗಕರ್ಮಿ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಜಗದ್ವಿಖ್ಯಾತ ನಾಟಕಕಾರ ಶೇಕ್ಸ್‍ಪಿಯರ್‍ನ `ಟೆಂಪೆಸ್ಟ್''ಆಧಾರಿತ ಈ ನಾಟಕವನ್ನು ಶ್ರೀಮತಿ ವೈದೇಹಿ ರಚಿಸಿದ್ದಾರೆ. ಅದ್ಭುತ ರಂಗವಿನ್ಯಾಸ, ಜಾದೂ ತಂತ್ರಗಳು, ಸ್ಪಷ್ಟ ಮಾತುಗಾರಿಕೆ, ವಿಶೇಷ ವಸ್ತ್ರ ವಿನ್ಯಾಸ, ಬೆಳಕಿನ ವಿನ್ಯಾಸ, ಸುಶ್ರಾವ್ಯ ಸಂಗೀತದಿಂದ ಕೂಡಿರುವ ಈ ನಾಟಕ ಈಗಾಗಲೇ ರಾಜ್ಯದಾದ್ಯಂತ 125 ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡಿದ್ದು, ಅಪಾರ ಜನಮೆಚ್ಚುಗೆ ಪಡೆದ ರಂಗ ಪ್ರಯೋಗವಾಗಿರುತ್ತದೆ.
ಪ್ರತಿದಿನ ಸಾರ್ವಜನಿಕರು,ವಿದ್ಯಾರ್ಥಿಗಳು ಸೇರಿದಂತೆ 2000 ಜನರಿಗೆ ನಾಟಕ ಪ್ರದರ್ಶನ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ನಾಟಕ ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು, ಉಚಿತ ಪ್ರವೇಶವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.