ಶರತ್ ಮಡಿವಾಳ ಹತ್ಯೆ ಪ್ರಕರಣ: ಪೊಲೀಸರ ವಶದಲ್ಲಿರುವವರ ತೀವ್ರ ವಿಚಾರಣೆ

Update: 2017-07-16 15:04 GMT

ಬಂಟ್ವಾಳ, ಜು. 16: ಸಜಿಪ ಮುನ್ನೂರು ಹಾಗೂ ಬಿ.ಸಿ.ರೋಡ್ ಕೈಕಂಬ ಪರಿಸರದ ಮೂವರನ್ನು ವಶದಲ್ಲಿಸಿಕೊಂಡಿರುವ ವಿಶೇಷ ಪೊಲೀಸ್ ತನಿಖಾ ತಂಡ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಿದೆ ಎನ್ನಲಾಗಿದೆ. ಆದರೆ ಆರೋಪಿಗಳನ್ನು ಶರತ್ ಹತ್ಯೆ ಪ್ರಕರಣದ ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಬಗ್ಗೆ ಸ್ಪಷ್ಟಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. 

ಬಿ.ಸಿ.ರೋಡ್ ಕೈಕಂಬ ಪರಿಸರದ ನಾಲ್ವರು ಶಂಕಿತ ಆರೋಪಿಗಳನ್ನು ಶುಕ್ರವಾರ ಬೆಳಗ್ಗಿನ ಜಾವ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ವಶಕ್ಕೆ ಪಡೆದ ಪೊಲೀಸರ ತಂಡ ಇಬ್ಬರನ್ನು ಶುಕ್ರವಾರ ರಾತ್ರಿ ಬಿಡುಗಡೆಗೊಳಿಸಿದರೆ, ಒಬ್ಬನನ್ನು ಶನಿವಾರ ಬಿಡುಗಡೆಗೊಳಿಸಿದೆ ಎನ್ನಲಾಗಿದೆ. 

ಆ ನಾಲ್ವರ ಪೈಕಿ ಒಬ್ಬನನ್ನು ವಶದಲ್ಲಿರಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಸಜೀಪ ಮುನ್ನೂರು ಗ್ರಾಮದ ಇಬ್ಬರು ಪೊಲೀಸರ ವಶದಲ್ಲಿದ್ದು ಈ ಪೈಕಿ ಒಬ್ಬಾತನನ್ನು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಬಿ.ಸಿ.ರೋಡಿಗೆ ಬರುತ್ತಿದ್ದ ವೇಳೆ ವಶಕ್ಕೆ ಪಡೆದರೆ, ಇನ್ನೊಬ್ಬನನ್ನು ಶನಿವಾರ ಸಂಜೆ ಉಳ್ಳಾಲದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 

ವಶಕ್ಕೆ ಪಡೆದ ಮಾಹಿತಿ ನೀಡದ ಪೊಲೀಸರು: ಯವುದೇ ಪ್ರಕರಣದ ವಿಚಾರಣೆಗಾಗಿ ಯಾರನ್ನು ಬೇಕಾದರೂ ವಶಕ್ಕೆ ಪಡೆಯುವ ಹಕ್ಕು ಪೊಲೀಸರಿಗೆ ಇದೆ. ಹಾಗೆಯೇ ಆರೋಪಿಗಳನ್ನು ವಶಕ್ಕೆ ಪಡೆದ ಬಗ್ಗೆ ಅವರ ಮನೆಯವರಿಗೆ ಮಾಹಿತಿ ನೀಡಬೇಕು. ಆದರೆ ಬಿ.ಸಿ.ರೋಡ್ ಮತ್ತು ಸಜಿಪ ಮುನ್ನೂರು ಗ್ರಾಮದ ನಿವಾಸಿಗಳನ್ನು ವಶಕ್ಕೆ ಪಡೆದ ಬಗ್ಗೆ ಪೊಲೀಸರು ಮನೆಯವರಿಗೆ ಮಾಹಿತಿ ನೀಡಿಲ್ಲ. ವಶಕ್ಕೆ ಪಡೆದ ಅನುಮಾನದಲ್ಲಿ ಪೊಲೀಸರ ಬಳಿ ವಿಚಾರಿಸಿದಾಗಲೂ ಸರಿಯಾದ ಪ್ರತಿಕ್ರಿಯೆ ನೀಡದೆ ಇಡೀ ದಿನ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಾಪತ್ತೆ ಕೇಸ್ ನೀಡಲು ಮುಂದಾದರೂ ಕೇಸ್ ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ. ವಶಕ್ಕೆ ಪಡೆದಿದ್ದೇವೆ, ಆದರೆ ಅವರು ಎಲ್ಲಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಬೇಜಾಬ್ದಾರಿ ಹೇಳಿಕೆ ನೀಡುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಬಂಟ್ವಾಳದ ನಾಗರಿಕರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News