ಪಡುಬೆಳ್ಳೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಉಡುಪಿ, ಜು.16: ಪಡುಬೆಳ್ಳೆ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮೃತ ಶಂಕರ ಆಚಾರ್ಯರು ಇನ್ನಂಜೆ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ಕುರ್ಕಾಲು ಶಾಖೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂ. ಸಾಲ ಪಡೆದುಕೊಂಡಿರುವುದೇ ಆತ್ಮಹತ್ಯೆಗೆ ಕಾರಣ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಪಡುಬೆಳ್ಳೆಯ ಶಂಕರ ಆಚಾರ್ಯರು ಕಳೆದ ಒಂದು ವರ್ಷ ಅವಧಿಯಲ್ಲಿ ಕುಂಜಾರುಗಿರಿಯಲ್ಲಿರುವ ಸಂಘದ ಕುರ್ಕಾಲು ಶಾಖೆಯಲ್ಲಿ 3ಕೆ.ಜಿ. ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಒಟ್ಟು 65ಲಕ್ಷ ರೂ. ಸಾಲ ಪಡೆದುಕೊಂಡು ಸಂಘಕ್ಕೆ ಮೋಸ ಮಾಡಿದ್ದರು ಎಂದು ಬ್ಯಾಂಕಿನ ಜನರಲ್ ಮೆನೇಜರ್ ಮನೋಹರ್ ರಾವ್ ಇಂದು ಶಿರ್ವ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕಳೆದ 30ವರ್ಷಗಳಿಂದ ಪಡುಬೆಳ್ಳೆಯಲ್ಲಿ ಶ್ರೀಯಾ ಜುವೆಲ್ಲರ್ಸ್ ನಡೆಸುತ್ತಿದ್ದ ಶಂಕರ ಆಚಾರ್ಯರು, ಸುಮಾರು 15 ವರ್ಷಗಳಿಂದ ಬ್ಯಾಂಕಿನ ಕುರ್ಕಾಲು ಶಾಖೆಯ ಗ್ರಾಹಕರಾಗಿದ್ದು, ಹಲವು ಬಾರಿ ಚಿನ್ನ ಅಡವಿಟ್ಟು ಸಾಲ ಪಡೆದು ಮರುಪಾವತಿ ಮಾಡಿದ್ದರು. ಇವರ ಹೆಸರಲ್ಲಿ ಈ ಶಾಖೆಯಲ್ಲಿ ಒಟ್ಟು 93 ಸಾಲದ ಖಾತೆ ಇದ್ದು, ಈ ಎಲ್ಲಾ ಖಾತೆಗಳಲ್ಲಿ ಒಟ್ಟು 3 ಕೆ.ಜಿ. ನಕಲಿ ಚಿನ್ನ ಅಡವಿಟ್ಟಿದ್ದರು. ಇದರಲ್ಲಿ 100 ಗ್ರಾಂ ಚಿನ್ನ ಹೊರತು ಪಡಿಸಿ ಉಳಿದ ಎಲ್ಲ ಚಿನ್ನಾಭರಣಗಳು ನಕಲಿಯಾಗಿದ್ದವು ಎಂದು ಬ್ಯಾಂಕಿನ ಮೂಲಗಳು ತಿಳಿಸಿವೆ.
ವ್ಯವಸ್ಥಾಪಕ ಶಾಮೀಲು: ಜು.13ರಂದು ಶಂಕರ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಕುರ್ಕಾಲು ಶಾಖೆಯ ವ್ಯವಸ್ಥಾಪಕ ಉಮೇಶ್ ಅಮೀನ್, ಬ್ಯಾಂಕಿನ ಜನರಲ್ ಮೆನೇಜರ್ ಮನೋಹರ್ ರಾವ್ ಅವರಿಗೆ ಶಂಕರ ಆಚಾರ್ಯರಿಗೆ ಸಾಲ ನೀಡಿರುವ ವಿಚಾರ ತಿಳಿಸಿದ್ದಾರೆ. ಕೂಡಲೇ ಮನೋಹರ್ ರಾವ್ ಬೇರೆ ಸರಾಪರ್ ಮೂಲಕ ಶಂಕರ ಆಚಾರ್ಯ ಅಡ ವಿಟ್ಟ ಚಿನ್ನದ ಪರೀಕ್ಷೆಯನ್ನು ಮಾಡಿಸಿದಾಗ ಇವುಗಳು ನಕಲಿ ಎಂಬುದು ತಿಳಿದು ಬಂತು.
ಶಂಕರ ಆಚಾರ್ಯ ಮಾಡಿರುವ ಈ ವಂಚನೆಯಲ್ಲಿ ವ್ಯವಸ್ಥಾಪಕ ಉಮೇಶ್ ಅಮೀನ್ ಹಾಗೂ ಸರಾಪರ್ ಉಮೇಶ್ ಆಚಾರ್ಯ ಶಾಮೀಲು ಆಗಿದ್ದಾರೆ ಎಂದು ಮನೋಹರ್ ರಾವ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಶಂಕರ ಆಚಾರ್ಯರ ನಕಲಿ ಚಿನ್ನವನ್ನು ಸರಾಪರ್ ಉಮೇಶ್ ಆಚಾರ್ಯ ಅಸಲಿ ಎಂದು ಸುಳ್ಳು ಹೇಳಿ, ವ್ಯವಸ್ಥಾಪಕ ಉಮೇಶ್ ಅಮೀನ್ ಬ್ಯಾಂಕಿನ 5ಲಕ್ಷ ರೂ. ಸಾಲದ ಮಿತಿಯ ನಿಯಮವನ್ನು ಮೀರಿ 65 ಲಕ್ಷ ರೂ.ವರೆಗೆ ಸಾಲವನ್ನು ಶಂಕರ ಆಚಾರ್ಯರಿಗೆ ನೀಡಿದ್ದರು ಎಂದು ದೂರಲಾಗಿದೆ.
ಶಂಕರ ಆಚಾರ್ಯ ಕೊಲ್ಕತ್ತಾದಿಂದ ತರಿಸುತ್ತಿದ್ದ 80ರೂ. ಮೌಲ್ಯದ ಸರಗಳಿಗೆ ಎರಡು ಬಾರಿ ಚಿನ್ನದ ಕೋಟಿಂಗ್ ಮಾಡಿ ಅಡವು ಇಡುತ್ತಿದ್ದರು. ಅಡವಿಟ್ಟ ನಕಲಿ ಚಿನ್ನಾಭರಣಗಳಲ್ಲಿ ಹೆಚ್ಚಿನವು ಸರ ಆಗಿದ್ದರೆ, ಉಳಿದಂತೆ ಬ್ರಾಸ್‌ಲೈಟ್ ಹಾಗೂ ಬಳೆಗಳು ಕೂಡ ಇದ್ದವು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮೊದಲು ತನ್ನ ಬಳಿ ಸುಮಾರು 25 ಮಂದಿ ಕೆಲಸಗಾರರನ್ನು ಇಟ್ಟುಕೊಂಡು ಉದ್ಯಮ ನಡೆಸುತ್ತಿದ್ದ ಇವರು, ಉಡುಪಿಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳ ಚಿನ್ನದ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಈ ಮಧ್ಯೆ ಕೇಂದ್ರ ಸರಕಾರ ವಿಧಿಸಿದ ಚಿನ್ನಾಭರಣಗಳ ಮೇಲಿನ ತೆರಿಗೆ, ನೋಟು ರದ್ಧತಿ ಪರಿಣಾಮ ಇವರ ಉದ್ಯಮ ನಷ್ಟಕ್ಕೀಡಾಗಿ ಸಾಲ ಮಾಡುವ ಸ್ಥಿತಿ ಬಂತೆನ್ನಲಾಗಿದೆ. ಇವರು ಬ್ಯಾಂಕಿನಿಂದ ಪಡೆದ 65ಲಕ್ಷ ರೂ. ಯಾವುದಕ್ಕೆ ಬಳಸಿಕೊಂಡಿದ್ದಾರೆಂಬುದು ಇನ್ನೂ ನಿಗೂಢವಾಗಿದೆ.
ವಂಚನೆ ಭೀತಿಯಲ್ಲಿ ಆತ್ಮಹತ್ಯೆ: ನಕಲಿ ಚಿನ್ನಾಭರಣ ಅಡವು ಇಟ್ಟಿರುವ ವಿಚಾರ ಹೊರಗಡೆ ಬರಬಹುದೆಂಬ ಭೀತಿಯಲ್ಲಿ ಶಂಕರ ಆಚಾರ್ಯ ತನ್ನ ಪತ್ನಿ ಹಾಗೂ ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ಬಲವಾಗಿದೆ. ಬ್ಯಾಂಕಿನಲ್ಲಿ ಅಡವಿಟ್ಟ ಚಿನ್ನಾಭರಣಗಳು ನಕಲಿ ಎಂಬುದು ಬ್ಯಾಂಕಿನವರಿಗೆ ತಿಳಿದಿದೆ ಎಂಬ ಮಾಹಿತಿ ಶಂಕರ ಆಚಾರ್ಯರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಕೆಲ ದಿನಗಳ ಹಿಂದೆ ಗೊತ್ತಾಗಿದೆ. ಅದಕ್ಕಾಗಿ ಅವರು ಈ ಚಿನ್ನ ಬಿಡಿಸಲು ತನ್ನ ಗೆಳೆಯರೊಂದಿಗೆ ಹಣ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಹೆಚ್ಚಿನವರು ಹಣ ಇಲ್ಲ ಎಂದು ಹೇಳಿ ಕೈಚೆಲ್ಲಿದ್ದರೆಂದು ತಿಳಿದುಬಂದಿದೆ.
ಈ ಮಧ್ಯೆ ಶಂಕರ ಆಚಾರ್ಯರ ಮಗಳು ಶ್ರುತಿ ಆಚಾರ್ಯಳಿಗೆ ಹೈದರಬಾದಿನ ಇಂಜಿನಿಯರ್‌ನೊಂದಿಗೆ ವಿವಾಹ ಕೂಡ ನಿಶ್ಚಯವಾಗಿತ್ತು. ಇದೀಗ ಈ ವಂಚನೆ ಪ್ರಕರಣ ಬಯಲಿಗೆ ಬಂದರೆ ಇಡೀ ಕುಟುಂಬದ ಮಾನ ಹರಾಜು ಆಗಬಹುದೆಂಬ ಹಾಗೂ ಮಗಳ ಮದುವೆ ಕೂಡ ನಿಲ್ಲಬಹುದೆಂಬ ಭೀತಿಗೆ ಶಂಕರ ಆಚಾರ್ಯರು ಒಳಗಾಗಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಇದೇ ಕಾರಣಕ್ಕೆ ಅವರು ಜು.13ರಂದು ಬೆಳಗ್ಗೆ ಮನೆಯವರಿಗೆ ಗೊತ್ತಿಲ್ಲದ ರೀತಿಯಲ್ಲಿ ಅನ್ನದಲ್ಲಿ ಸೈನೆಡ್ ಬೆರೆಸಿ ತಾನು ಹಾಗೂ ಪತ್ನಿ ನಿರ್ಮಲ ಆಚಾರ್ಯ(43), ಮಕ್ಕಳಾದ ಶ್ರುತಿ ಆಚಾರ್ಯ(24) ಮತ್ತು ಶ್ರೀಯಾ ಆಚಾರ್ಯ(22) ಸಾಯುವಂತೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬ್ಯಾಂಕಿಗೆ ವಂಚನೆ: ಇಬ್ಬರ ಬಂಧನ
ಶಂಕರ ಆಚಾರ್ಯ ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕಿಗೆ ವಂಚನೆ ಎಸಗಿರುವ ಪ್ರಕರಣದಲ್ಲಿ ಶಾಮೀಲಾಗಿರುವ ಕುರ್ಕಾಲು ಶಾಖೆಯ ವ್ಯವಸ್ಥಾಪಕ ಇನ್ನಂಜೆಯ ಉಮೇಶ್ ಅಮೀನ್(35) ಹಾಗೂ ಕುಂಜಾರುಗಿರಿಯ ಸರಾಪರ್ ಉಮೇಶ್ ಆಚಾರ್ಯ(35) ಎಂಬವರನ್ನು ಶಿರ್ವ ಪೊಲೀಸರು ಇಂದು ಬಂಧಿಸಿದ್ದಾರೆ.