ಸಾಮರಸ್ಯದಿಂದ ಅಭಿವೃದ್ಧಿ: ರಾಮಕೃಷ್ಣ ಯಾಜಿ
ಮಂಗಳೂರು, ಜು. 16: ಸಾಮಾಜಿಕ ಶಾಂತಿ ಮತ್ತು ಕೋಮು ಸಾಮರಸ್ಯದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ವಾಮಂಜೂರು ಸಂತ ಜೋಸೆಫ್ ಎಂಜಿನಿಯರಿಂಗ್ ರಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ರಾಮಕೃಷ್ಣ ಯಾಜಿ ಹೇಳಿದ್ದಾರೆ.
ಅವರು ಸದ್ಭಾವನಾ ವೇದಿಕೆ ಜಪ್ಪು ವರ್ತುಲದ ವತಿಯಿಂದ ಜಪ್ಪುವಿನ ಕಾಶಿಯಾ ಚರ್ಚ್ ಸಭಾಂಗಣದಲ್ಲಿ ರವಿವಾರ ನಡೆದ ಈದ್ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ಅಹಿಕರ ಘಟನೆಗಳಿಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಿದ ಅವರು, ಧರ್ಮಗಳು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಗಲಾಟೆ ನಡೆಸುವುದು, ಕೋಮು ಸಾಮರಸ್ಯವನ್ನು ಹಾಳು ಮಾಡುವುದು ಸರಿಯಲ್ಲ. ಮಾನವನಾದವನು ಮೊದಲು ಮಾನವೀಯತೆಯನ್ನು ಪ್ರದರ್ಶಿಸಬೇಕೆಂದು ಅವರು ಸಲಹೆ ನೀಡಿದರು.
ಇಂದಿನ ದಿನಗಳಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ನಂಬಿಕೆ ಇಲ್ಲದಾಗಿದೆ. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವೇದಿಕೆ ಹಮ್ಮಿಕೊಂಡಿರುವ ಸೌಹಾರ್ದ ಕೂಟ ಅರ್ಥಪೂರ್ಣವಾಗಿದೆ. ಏಕತೆ ಮತ್ತು ಕೋಮು ಸಾಮರಸ್ಯಕ್ಕೆ ಎಲ್ಲರೂ ಒತ್ತು ನೀಡಬೇಕು. ಯಾವುದೇ ಕೋಮು ಪ್ರಚೋದನೆ ಹೇಳಿಕೆಗಳನ್ನು ಸ್ವೀಕರಿಸಬಾರದು. ಈ ಬಗ್ಗೆ ಜಾಗೃತಿ ವಹಿಸುವಂತೆ ರಾಮಕೃಷ್ಣ ಯಾಜಿ ಹೇಳಿದರು.
ವೇದಿಕೆಯ ಅಧ್ಯಕ್ಷ ಎಂ.ವಿ.ಸುರೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಧರ್ಮಾಧಾರಿತವಾಗಿ ಗಲಭೆಗಳು ನಡೆಯುತ್ತಿಲ್ಲ. ಬದಲಾಗಿ ರಾಜಕೀಯ ಪ್ರೇರಿತವಾಗಿ ಗಲಭೆಗಳು ಸೃಷ್ಟಿಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಜಪ್ಪು ಕುಡುಪಾಡಿಯ ಕರುಣಾಮಯ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಎಲಿಯಾಸ್ ಪೀಟರ್ ಕೊಹಿಲೊ, ಮಂಗಳೂರು ಫಾರ್ವರ್ಡ್ ಕೌನ್ಸಿಲಿಂಗ್ ಸೆಂಟರ್‌ನ ಸಲಹೆಗಾರ ಸಈದ್ ಇಸ್ಮಾಯೀಲ್ ಉಪಸ್ಥಿತರಿದ್ದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಲಿಹ್ ಮುಹಮ್ಮದ್ ವಂದಿಸಿದರು. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.