×
Ad

ರಾಷ್ಟ್ರಪತಿ ಚುನಾವಣೆ: ಕೋವಿಂದ್- ಮೀರಾ ನಡುವೆ ನೇರ ಹಣಾಹಣಿ

Update: 2017-07-16 21:36 IST

ಹೊಸದಿಲ್ಲಿ, ಜು.16: ಸ್ವತಂತ್ರ ಭಾರತದ 14ನೇ ರಾಷ್ಟ್ರಪತಿ ಚುನಾವಣೆಯು ಸೋಮವಾರ ನಡೆಯಲಿದ್ದು, ದೇಶಾದ್ಯಂತ ಸಂಸದರು ಹಾಗೂ ಶಾಸಕರು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಹಾಗೂ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಮೀರಾ ಕುಮಾರ್ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆಗೆ ಈ ಚುನಾವಣೆ ಸಾಕ್ಷಿಯಾಗಲಿದೆ.

ಬಿಹಾರದ ಮಾಜಿ ರಾಜ್ಯಪಾಲರಾದ ಕೋವಿಂದ್, ಪ್ರತಿಪಕ್ಷ ಅಭ್ಯರ್ಥಿ ಮೀರಾ ಕುಮಾರ್‌ಗಿಂತ ಸ್ಪಷ್ಟವಾದ ಮುನ್ನಡೆಯನ್ನು ಹೊಂದಿದ್ದು,ಅವರು 10.98 ಲಕ್ಷ ಮತ ವೌಲ್ಯವನ್ನು ಹೊಂದಿರುವ ಶೇ. 63ರಷ್ಟು ಮತದಾರರ ಬೆಂಬಲವನ್ನು ಹೊಂದಿರುವುದಾಗಿ ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ, ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಕಾಂಗ್ರೆಸ್, ಟಿಎಂಸಿ ಸಿಪಿಎಂ, ಎಸ್ಪಿ, ಬಿಎಸ್‌ಪಿ, ಡಿಎಂಕೆ ಹಾಗೂ ಜೆಡಿಎಸ್ ಸೇರಿದಂತೆ 16 ಪ್ರತಿಪಕ್ಷಗಳ ಬೆಂಬಲ ಹೊಂದಿದ್ದಾರೆ.

ವಿವಿಧ ರಾಜಧಾನಿಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದ ಮೀರಾ ಕುಮಾರ್ ಅವರು ಕೋವಿಂದ್ ವಿರುದ್ಧದ ತನ್ನ ಸ್ಪರ್ಧೆಯು, ಸಿದ್ಧಾಂತಗಳ ಸಮರವೆಂದು ಬಣ್ಣಿಸಿದ್ದರು.

 ರವಿವಾರ ಹೊಸದಿಲ್ಲಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಆಯೋಜಿಸಿದ್ದ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಯಾವುದೇ ಮತವು ವ್ಯರ್ಥವಾಗದಂತೆ ತಮ್ಮ ಸಂಸದರು ಹಾಗೂ ಶಾಸಕರಿಗೆ ಮನವರಿಕೆ ಮಾಡಬೇಕೆಂದು ಕರೆ ನೀಡಿದ್ದರು.

‘‘ರಾಷ್ಟ್ರಪತಿ ಚುನಾವಣೆಯು ಸಹಮತದ ಮೂಲಕ ನಡೆದಿದ್ದರೆ ಚೆನ್ನಾಗಿತ್ತು. ಆದಾಗ್ಯೂ ಚುನಾವಣಾ ಪ್ರಚಾರವು ಘನತೆ ಹಾಗೂ ಸಭ್ಯತೆಯೊಂದಿಗೆ ನಡೆದಿರುವುದು ತೃಪ್ತಿ.ಯುಂಟು ಮಾಡಿದೆ’’ ಎಂದು ಮೋದಿ ಸಭೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದರು.

ಈ ಮಧ್ಯೆ ಚುನಾವಣಾ ಆಯೋಗವು ಹೇಳಿಕೆಯೊಂದನ್ನು ನೀಡಿ ಸಂಸದರು ಹಾಗೂ ವಿಧಾನಸಭಾ ಶಾಸಕರು ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲು ಹೊಸದಿಲ್ಲಿಯ ಸಂಸತ್‌ಭವನದಲ್ಲಿ ಹಾಗೂ ದೇಶಾದ್ಯಂತದ ರಾಜ್ಯ ವಿಧಾನಸಭೆಗಳಲ್ಲಿ ವ್ಯಾಪಕವಾದ ಸಿದ್ಧತೆಗಳನ್ನು ಮಾಡಲಾಗಿದೆಯೆಂದು ತಿಳಿಸಿದೆ.

  ಸಂಸದರು ಹಾಗೂ ಶಾಸಕರು ಗರಿಷ್ಠ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವುದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚುನಾವಣಾ ಆಯೋಗವು 14 ಮಂದಿ ರಾಜ್ಯಸಭಾ ಸದಸ್ಯರು ಹಾಗೂ 41 ಮಂದಿ ಲೋಕಸಭಾ ಸದಸ್ಯರಿಗೆ ತಮ್ಮ ಆಯ್ಕೆಯ ಮತಗಟ್ಟೆಯಲ್ಲಿ ಮತದಾನ ಮಾಡುವುದಕ್ಕೆ ಏರ್ಪಾಡುಗಳನ್ನು ಮಾಡಿದೆ.

  ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವಪ್ರಸಾದ್ ವೌರ್ಯ, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಸಂಸತ್ ಸದಸ್ಯರಾಗಿದ್ದು ಅವರು ಮೂವರು ಉತ್ತರಪ್ರದೇಶ ಹಾಗೂ ಗೋವಾದಲ್ಲಿನ ವಿಧಾನಸಭೆಗಳಲ್ಲಿ ಮತದಾನ ಮಾಡಲಿದ್ದಾರೆ. ಇವರಲ್ಲದೆ ಮೂವರನ್ನು ಹೊರತುಪಡಿಸಿ ತೃಣಮೂಲ ಕಾಂಗ್ರೆಸ್‌ನ ಉಳಿದ ಎಲ್ಲಾ ಸಂಸದರು ಪ.ಬಂಗಾಳದಲ್ಲೇ ಮತದಾನ ಮಾಡಲಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳಲ್ಲದೆ, ಎಡಿಎಂಕೆ, ತೆಲಂಗಾಣ ರಾಷ್ಟ್ರ ಸಮಿತಿ, ವೈಎಸ್‌ಆರ್ ಕಾಂಗ್ರೆಸ್, ಬಿಜು ಜನತಾದಳ ಹಾಗೂ ಜೆಡಿಯು ಕೂಡಾ ಕೋವಿಂದ್‌ಗೆ ಬೆಂಬಲ ಘೋಷಿಸಿದೆ. ಕೆಲವು ಪ್ರತಿಪಕ್ಷ ಸಂಸದರು ಅಡ್ಡ ಮತದಾನ ಮಾಡುವ ಸಾಧ್ಯತೆಯಿರುವುದರಿಂದ ಕೋವಿಂದ್ ಅವರ ಪರ ನಿರೀಕ್ಷೆಗಿಂತ ಅಧಿಕ ಮತಗಳು ಬೀಳುವ ಸಾಧ್ಯತೆಗಳಿವೆಂದು ಬಿಜೆಪಿ ಅಂದಾಜಿಸಿದೆ.

ಒಟ್ಟು ಮತದಾರರು 4896

ಸಂಸದರು  776

ಶಾಸಕರು  4120

 ಒಟ್ಟು ಮತದಾರರ ಪೈಕಿ 451 ಮಂದಿ ಮಹಿಳೆಯರು. ಲೋಕಸಭೆಯಲ್ಲಿ 65 ಹಾಗೂ ರಾಜ್ಯಸಭೆಯಲ್ಲಿ 23 ಮಹಿಳಾ ಸಂಸದೆಯರಿದ್ದಾರೆ. ದೇಶಾದ್ಯಂತ 363 ಶಾಸಕಿಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News