ಹವಾಯಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಟ್ರಂಪ್ ಸರಕಾರ ಸುಪ್ರೀಂ ಕೋರ್ಟ್‌ಗೆ
ವಾಶಿಂಗ್ಟನ್, ಜು. 16: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ವಿಧಿಸಿರುವ ತಾತ್ಕಾಲಿಕ ಅಮೆರಿಕ ಪ್ರವೇಶ ನಿರ್ಬಂಧದಿಂದ ವಿನಾಯಿತಿಗೊಳಗಾಗುವವರ ಪಟ್ಟಿಯನ್ನು ವಿಸ್ತರಿಸುವ ಹವಾಯಿಯ ಫೆಡರಲ್ ನ್ಯಾಯಾಲಯವೊಂದರ ತೀರ್ಪನ್ನು ಪ್ರಶ್ನಿಸಿ ಡೊನಾಲ್ಡ್ ಟ್ರಂಪ್ ಆಡಳಿತ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಹವಾಯಿ ನ್ಯಾಯಾಲಯವು ನಿರ್ಬಂಧದಿಂದ ವಿನಾಯಿತಿಗೊಳಗಾದವರ ಪಟ್ಟಿಗೆ ಅಜ್ಜ-ಅಜ್ಜಿಯರು, ಭಾವ-ಅತ್ತಿಗೆಯಂದಿರುವ, ಸೋದರ ಸಂಬಂಧಿಗಳು, ಸೋದರಳಿಯಂದಿರು-ಸೋದರ ಸೊಸೆಯಂದಿರು, ಸೋದರ ಮಾವಂದಿರು, ಸೋದರ ಅತ್ತೆಯಂದಿರು, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರನ್ನು ಸೇರಿಸಿದೆ ಹಾಗೂ ಅಮೆರಿಕದಲ್ಲಿ ಈಗಾಗಲೇ ಪುನರ್ವಸತಿ ಸಂಸ್ಥೆಯೊಂದರ ಜೊತೆ ಕೆಲಸ ಮಾಡುತ್ತಿರುವ ನಿರಾಶ್ರಿತರ ಪ್ರವೇಶಕ್ಕೆ ಅನುಮತಿ ನೀಡಿದೆ.
ಹವಾಯಿ ನ್ಯಾಯಾಲಯದ ಆದೇಶವು ಕೇವಲ ‘ಆಪ್ತ’ ಸಂಬಂಧಿಕರನ್ನಲ್ಲ, ಕುಟುಂಬದ ಎಲ್ಲ ಸದಸ್ಯರನ್ನು ನಿರ್ಬಂಧ ವಿನಾಯಿತಿ ಪಟ್ಟಿಗೆ ಸೇರಿಸಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಕಾನೂನು ಇಲಾಖೆ ಹೇಳಿದೆ.
ಜೂನ್ 26ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಟ್ರಂಪ್ ಆದೇಶದ ಕೆಲವು ಭಾಗಗಳ ಅನುಷ್ಠಾನಕ್ಕೆ ಅನುಮತಿ ನೀಡಿತ್ತು ಹಾಗೂ ಅಮೆರಿಕದಲ್ಲಿ ವಾಸಿಸುತ್ತಿರುವ ಜನರ ಸಂಬಂಧಿಕರು ನಿಷೇಧಿತ ದೇಶಗಳಲ್ಲಿದ್ದರೆ, ‘ಆಪ್ತ’ ಸಂಬಂಧಿಕರಿಗೆ ಅಮೆರಿಕ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸೂಚಿಸಿತ್ತು.
ಆಪ್ತ ಕುಟುಂಬ ಸದಸ್ಯರ ಪಟ್ಟಿಯನ್ನು ತಯಾರಿಸುವ ಹೊಣೆಯನ್ನು ಅದು ಸರಕಾರಕ್ಕೆ ವಹಿಸಿತ್ತು.
ಟ್ರಂಪ್ ಸರಕಾರವು ಹೆತ್ತವರು, ಮಕ್ಕಳು, ಸಹೋದರ-ಸಹೋದರಿಯರು, ಅಳಿಯಂದಿರು, ಸೊಸೆಯಂದಿರು, ಪ್ರಿಯತಮ-ಪ್ರಿಯತಮೆಯಂದಿರು ಮತ್ತು ಮಲಮಕ್ಕಳನ್ನು ಒಳಗೊಂಡ ಸೀಮಿತ ವಿನಾಯಿತಿ ಪಟ್ಟಿಯೊಂದನ್ನು ಸಿದ್ಧಪಡಿಸಿತ್ತು.