×
Ad

ರೈಲಿನಲ್ಲಿ ಪ್ರಯಾಣಿಕರಿಗೆ ಬೆದರಿಸಿ ಚಿನ್ನ ದರೋಡೆ : ಪ್ರಯಾಣಿಕರ ಆರೋಪ

Update: 2017-07-16 22:41 IST

ಮಂಗಳೂರು, ಜು. 16: ದೆಹಿಲಿಯಿಂದ ರೈಲಿನಲ್ಲಿ ಮಂಗಳೂರಿಗೆ ಹಿಂದಿರುಗುತ್ತಿದ್ದ ಪ್ರವಾಸಿಗರಿಗೆ ಅದರಲ್ಲಿದ್ದ ತಂಡವೊಂದು ಚಾಕು ತೋರಿಸಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕೊಡಗು ಮೂಲದ ಮಣಿ (68), ಅವರ ಮೊಮ್ಮಗಳಾದ ಗಾನಶ್ರೀ ಮತ್ತವಹ ಸ್ನೇಹಿತರಾದ ಪೂಜಾ, ಶ್ರೀಧರ, ಪ್ರಶಾಂತ್ ಮತ್ತು ವಾಸಿನ್ ಅವರು ತಂಡದಿಂದ ಬೆದರಿಕೆಗೊಳಗಾದವರು.

ಕೊಡಗು ಮೂಲದ ಈ 6 ಮಂದಿ ಮೂರ್ನಾಡು ನಿವಾಸಿಗಳು ಮನಾಲಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿಗೆ ವಾಪಸ್ ಬರುತ್ತಿದ್ದರು. ಶನಿವಾರ ಮಧ್ಯರಾತ್ರಿ ಸುಮಾರಿಗೆ ರೈಲು ಮಹಾರಾಷ್ಟ್ರದ ಪನ್ವೇಲ್ ಬಳಿ ಬರುತ್ತಿದ್ದಾಗ ರೈಲಿನಲ್ಲಿ ಸಿಗರೇಟ್ ಸೇವನೆ, ಮದ್ಯಪಾನ ಮಾಡುತ್ತಿದ್ದವರನ್ನು ಪ್ರವಾಸಿಗರು ಪ್ರಶ್ನಿಸಿದ್ದರು. ಇದರಿಂದ ಸಿಟ್ಟುಗೊಂಡ ತಂಡವೊಂದು ಯುವತಿಯರೂ ಇದ್ದ ಈ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿತ್ತು. ಚಾಕು ತೋರಿಸಿ ಯುವತಿಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ರೈಲಿನಲ್ಲಿದ್ದ ಪ್ರವಾಸಿಗರು ರೈಲಿನ ಚೈನ್ ಎಳೆದು ನಿಲ್ಲಿಸಲು ಯತ್ನಿಸಿದ್ದರು. ಆಗ ಮತ್ತೊಂದು ಬೋಗಿಯಲ್ಲಿದ್ದ ರೈಲ್ವೆ ಅಧಿಕಾರಿಗಳು ಚೈನ್ ಎಳೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಆರ್‌ಪಿಎಫ್ ಪೊಲೀಸರಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ತೋರಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದರು. ರೈಲಿನಲ್ಲಿ ಎರಡು ದಿನಗಳಿಂದ ಟಿಕೆಟ್ ಪರಿವೀಕ್ಷಕ ಕಂಡುಬಂದಿರಲಿಲ್ಲ. ಇತ್ತ ರೈಲ್ವೆ ಪೊಲೀಸರೂ ಸ್ಪಂದಿಸದ ಕಾರಣ ನೊಂದ ಪ್ರವಾಸಿಗರು ಮಹಾರಾಷ್ಟ್ರದ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಅಷ್ಟರಲ್ಲಿ ರೈಲು ಹೊರಟ ಕಾರಣ ನಿರುಪಾಯರಾದ ಪ್ರವಾಸಿಗರು ರವಿವಾರ ಬೆಳಗ್ಗೆ ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ತಲುಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News