ಪದ್ಮಶ್ರೀ ಮನಮೋಹನ್‌ಗೆ ಬಿಡುಗಡೆ ನೀಡಿದ ಸುಪ್ರೀಂ
ಹೊಸದಿಲ್ಲಿ, ಜು. 16: ನಾನು ಕ್ರಿಶ್ಚಿಯನ್, ನಾನು ಯಾರನ್ನಾದರೂ ವಿವಾಹವಾಗ ಬೇಕಾದರೆ ಹಣೆಗೆ ಕುಂಕುಮ ಯಾಕೆ ಹಚ್ಚಬೇಕು ? ಆಕೆ ತನ್ನೊಂದಿಗೆ ಬೆಂಗಳೂರಿನ ಜಯನಗರದಲ್ಲಿರುವ ಮನೆಯಲ್ಲಿ ವಾಸವಾಗಿರಲಿಲ್ಲ ಎಂದು ಪದ್ಮಶ್ರೀ ಮನಮೋಹನ್ ಅತ್ತಾವರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
19 ವರ್ಷಗಳ ಹಿಂದೆ ಹೊಸದಿಲ್ಲಿಯಲ್ಲಿ ಕುಂಕುಮ ಇರಿಸಿ ಅವರು ತನ್ನನ್ನು ವಿವಾಹವಾದರು. ನಾನು ಹಾಗೂ ಅವರು ಬೆಂಗಳೂರಿನ ಮನೆಯಲ್ಲಿ ವಾಸವಾಗಿದ್ದೆವು. ಆದುದರಿಂದ ಬೆಂಗಳೂರಿನ ಮನೆ ನನಗೆ ನೀಡಬೇಕು ಎಂದು ಮಹಿಳೆಯೋರ್ವರು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಮನಮೋಹನ್ ಅತ್ತಾವರ ಸುಪ್ರೀಂ ಕೋರ್ಟ್‌ನಲ್ಲಿ ಈ ರೀತಿ ಹೇಳಿದ್ದಾರೆ.
ಮನಮೋಹನ್ ಅತ್ತಾವರ ಅವರು ಪತ್ನಿ ನಿಧನದ ಬಳಿಕ ತನ್ನನ್ನು ವಿವಾಹವಾದರು. ನಾವಿಬ್ಬರು ಬೆಂಗಳೂರಿನಲ್ಲಿ ವಾಸವಾಗಿದ್ದೆವು ಎಂದು ಆರೋಪಿಸಿ ಮಹಿಳೆಯೋರ್ವಳು ಕೃಷಿ ಸಂಶೋಧನೆಯ ಭಾರತೀಯ ಮಂಡಳಿಯ ಮಾಜಿ ಸಂಪಾದಕ ಹಾಗೂ ಪದ್ಮಶ್ರೀ ಗೌರವಾನ್ವಿತ ಮನಮೋಹನ್ ಅತ್ತಾವರ್ ವಿರುದ್ಧ ಕಾನೂನು ನೆರವು ಪಡೆದುಕೊಂಡು ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಹಾಗೂ ಇತರ ಪ್ರಕರಣಗಳನ್ನು ದಾಖಲಿಸಿದ್ದರು.
ಕೆಳಹಂತದ ನ್ಯಾಯಾಲಯದ ಈ 62 ವರ್ಷದ ಈ ಮಹಿಳೆಗೆ ಪರಿಹಾರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆ ಉಚ್ಚ ನ್ಯಾಯಾಲಯದ ಮೊರೆ ಹೋದರು. 2016 ಸೆಪ್ಟಂಬರ್‌ನಲ್ಲಿ ಉಚ್ಚ ನ್ಯಾಯಾಲಯ ಮನಮೋಹನ್ ವಿರುದ್ಧ ಮಹಿಳೆ ದಾಖಲಿಸಿದ್ದ ಎಲ್ಲ ಪ್ರಕರಣಗಳ ಕಲಾಪ ರದ್ದುಗೊಳಿಸಿತು. ಹಾಗೂ ಬೆಂಗಳೂರಿನ ಜಯನಗರದಲ್ಲಿರುವ ಮನೆಯಲ್ಲಿ ವಾಸಿಸುವಂತೆ ಮಹಿಳೆಗೆ ನಿರ್ದೇಶನ ನೀಡಿತು.
ಉಚ್ಚ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮನಮೋಹನ್ ಅತ್ತಾವರ್ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ್ದರು. ಬೆಂಗಳೂರು ಮನೆಯಲ್ಲಿ ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ ಕಂಪೆನಿಯ ಅಧ್ಯಕರಾದ ಮನಮೋಹನ್ ಅತ್ತಾವರರು ಮಹಿಳೆಯೊಂದಿಗೆ ವಾಸವಾಗಿರಲಿಲ್ಲ. ಆದುದರಿಂದ ದೂರು ನೀಡಿದ ಮಹಿಳೆ ಹೇಳುವಂತೆ ಇದು ಹಂಚಿಕೊಂಡ ಮನೆಯಾಗಿರಲಿಲ್ಲ ಎಂದು ಆತ್ತಾವರ ಪರ ವಕೀಲರು ಹೇಳಿದ್ದರು.
ಮನಮೋಹನ್ ಅತ್ತಾವರ ಅವರ ಪ್ರತಿಪಾದನೆಯನ್ನು ಒಪ್ಪಿಕೊಂಡ ನ್ಯಾಯಮೂರ್ತಿ ರೋಹಿಂಟನ್ ಎಫ್.ನಾರೀಮನ್ ಹಾಗೂ ಸಂಜಯ್ ಕೆ. ಕೌಲ್ ಅವರನ್ನೊಳಗೊಂಡ ನ್ಯಾಯ ಪೀಠ ಬೆಂಗಳೂರಿನ ಮನೆ ಹಂಚಿಕೊಂಡ ಮನೆಯಲ್ಲ ಎಂದು ತೀರ್ಪು ನೀಡಿದೆ. ಆದುದರಿಂದ ಮನೆ ಮತ್ತೆ ಮನಮೋಹನ್ ಅತ್ತಾವರ್ ಅವರ ಪಾಲಿಗೆ ಬಂದಿದೆ.