×
Ad

ಅಕ್ರಮ 41 ಸಿಲಿಂಡರ್‌ಗಳು ವಶಕ್ಕೆ

Update: 2017-07-16 22:53 IST

ಮಂಗಳೂರು, ಜು. 16: ನಗರದ ಕುಲಶೇಖರದ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಇರಿಸಿದ್ದ ಸುಮಾರು 41 ಸಿಲಿಂಡರ್‌ಗಳನ್ನು ರವಿವಾರ ಕದ್ರಿ ಪೊಲೀಸರು ಹಾಗೂ ಆಹಾರ ಇಲಾಖಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಬಿಜೈ ನಿವಾಸಿ ಕುಲಶೇಖರ ಬಾಡಿಗೆ ಮನೆ ಹೊಂದಿದ್ದ ಅನಂತರಾಜು (45) ಅಕ್ರಮ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದ ಆರೋಪಿ. ಈತನಿಂದ 41 ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳಲ್ಲಿ 9 ಕಮರ್ಷಿಯಲ್ ಸಿಲಿಂಡರ್‌ಗಳಾಗಿದ್ದರೆ, ಉಳಿದವುಗಳು ಡೊಮೆಸ್ಟಿಕ್ ಸಿಲಿಂಡರ್‌ಗಳಾಗಿವೆ. ವಶಪಡಿಸಿಕೊಳ್ಳಲಾದ ಸಿಲಿಂಡರ್‌ಗಳ ಭಾರತ್, ಎಚ್‌ಪಿ, ಇಂಡೇನ್ ಕಂಪೆನಿಗೆ ಸೇರಿದ್ದವುಗಳಾಗಿವೆ.5 ಸಿಲಿಂಡರ್‌ಗಳಲ್ಲಿ ಅನಿಲ ತುಂಬಿವೆ. ಆರೋಪಿ ಹಲವು ವರ್ಷಗಳಿಂದ ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸಿ ಗ್ಯಾಸ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಮೂಲತಃ ವಿಟ್ಲದ ನಿವಾಸಿಯೋರ್ವರು ಹೊರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಕುಲಶೇಖರದಲ್ಲಿ ಮನೆಯೊಂದನ್ನು ಹೊಂದಿದ್ದು, ಅದನ್ನು ಆರೋಪಿ ಅನಂತುರಾಜುವಿಗೆ 8,000ರೂ.ಗೆ ಬಾಡಿಗೆಗಾಗಿ ನೀಡಿದ್ದರು. ಆದರೆ, 6 ತಿಂಗಳಿಂದ ಆತ ಬಾಡಿಗೆ ನೀಡದಿದ್ದ ಹಿನ್ನೆಲೆಯಲ್ಲಿ ಹೊರದೇಶದಿಂದ ಬಂದಿದ್ದ ಮನೆ ಮಾಲಕರು ಬಾಡಿಗೆ ಹಣ ನೀಡುವಂತೆ ಕೇಳಿದ್ದರು. ಆದರೆ, ಬಾಡಿಕೆ ಮಾತ್ರ ನೀಡಿರಲಿಲ್ಲ. ಮನೆ ಮಾಲಕರು ಮನೆ ಬಿಡುವಂತೆ ಸೂಚಿಸಿದಾಗ ಏಳುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಈ ಬಗ್ಗೆ ಮನೆ ಮಾಲಕರು ನೈಜ ವಿಷಯ ತಿಳಿಸಿದ್ದು, ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ಸೂಚನೆಯ ಮೇರೆಗೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ತೆರಳಿದ್ದರಿಂದ ಸತ್ಯಾಂಶ ಹೊರಬಿದ್ದಿದೆ. ಕೂಡಲೇ ಪೊಲೀಸರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News