​ಶಾಂತಿ ಸಭೆಗೆ ಸಿಗದ ಆಹ್ವಾನ: ಮುಸ್ಲಿಂ ಸೆಂಟ್ರಲ್ ಕಮಿಟಿ ಅಸಮಾಧಾನ

Update: 2017-07-17 07:50 GMT

ಮಂಗಳೂರು, ಜು.17: ದ.ಕ.ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುವ ಅಹಿತಕರ ಘಟನೆಯನ್ನು ಹತ್ತಿಕ್ಕುವ ಸಲುವಾಗಿ ಜಿಲ್ಲಾಡಳಿತವು ಮೊನ್ನೆ ಕರೆದ ಶಾಂತಿ ಸಭೆಗೆ ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಗೆ ಆಹ್ವಾನ ನೀಡಲಿಲ್ಲ ಎಂದು ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಖಾಸಗಿ ಹೊಟೇಲಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 49 ವರ್ಷಗಳಿಂದ ಸೆಂಟ್ರಲ್ ಕಮಿಟಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆೆ. ಕೋಮು ಸೌಹಾರ್ದಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇಂತಹ ಸಂಘಟನೆಯನ್ನು ಶಾಂತಿಸಭೆಗೆ ಆಹ್ವಾನಿಸದಿರಲು ಕಾರಣ ಏನೆಂಬುದಕ್ಕೆ ಜಿಲ್ಲಾಧಿಕಾರಿ ಉತ್ತರಿಸಬೇಕು. ಇದಕ್ಕೆ ಕಾರಣ ಕೇಳಿ ಪತ್ರ ಬರೆಯಲಾಗಿದೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಸೌಹಾರ್ದಕ್ಕಾಗಿ ನಡೆಸಿದ ಪ್ರಯತ್ನಗಳೆಲ್ಲಾ ಜಿಲ್ಲೆಯ ಪ್ರಜ್ಞಾವಂತರಿಗೆ ತಿಳಿದಿರುವ ವಿಚಾರ. ಆದರೆ, ಜಿಲ್ಲಾಧಿಕಾರಿ ಈ ಸಂಘಟನೆಯನ್ನು ಶಾಂತಿಸಭೆಗೆ ಕರೆಯದೆ ದೂರವಿಟ್ಟಿರುವುದು ಯಾತಕ್ಕೆ ಎಂಬುದು ತಿಳಿಯುತ್ತಿಲ್ಲ. ಡಿಜಿಪಿ ಮಂಗಳೂರಿಗೆ ಬಂದರೂ ಕೂಡ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರತಿನಿಧಿಗಳ ಜೊತೆ ಸಮಾಲೋಚಿಸುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಮುಹಮ್ಮದ್ ಮಸೂದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಪದಾಧಿಕಾರಿಗಳಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಅಶ್ರಫ್, ಹನೀಫ್ ಹಾಜಿ, ಹಮೀದ್ ಕುದ್ರೋಳಿ, ಅಬೂಬಕರ್ ಕುದ್ರೋಳಿ, ಸಿ.ಎಂ.ಮುಸ್ತಫಾ, ಸಿತಾರ್ ಮಜೀದ್ ಹಾಜಿ, ಮುಹಮ್ಮದ್ ಬಪ್ಪಳಿಗೆ, ಎಂ.ಎ.ಅಶ್ರಫ್, ಪಿ.ಪಿ.ಮಜೀದ್, ರಿಯಾಝ್ ಬಂದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News