ಪಲಿಮಾರು: ಗ್ರಾಪಂ ಕಚೇರಿಯೆದುರು ಹೆಣ ಸುಡಲು ಮುಂದಾದ ಗ್ರಾಮಸ್ಥರು!

Update: 2017-07-17 08:11 GMT

ಪಡುಬಿದ್ರೆ, ಜು.17: ಹೆಣ ಸುಡಲು ಸ್ಮಶಾನ ಇಲ್ಲದೆ ಇರುವುದನ್ನು ವಿರೋಧಿಸಿ ದಸಂಸ ಹಾಗೂ ಸಾರ್ವಜನಿಕರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಪಲಿಮಾರುವಿನಲ್ಲಿ ಸೋಮವಾರ ನಡೆದಿದೆ.

ಪಲಿಮಾರಿನ ಪೂವಪ್ಪ ಮೇಸ್ತ್ರಿ ಎಂಬವರು ರಾತ್ರಿ ಸಾವನ್ನಪ್ಪಿದ್ದರು. ಸೋಮವಾರ ಬೆಳಗ್ಗೆ ಗ್ರಾಮಸ್ಥರು ಸ್ಮಶಾನದ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ದಸಂಸ ಧರಣಿ ನಡೆಸಿತು. ಈ ವೇಳೆ ಧರಣಿನಿರತರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಹೆಣ ಸುಡಲು ಕಟ್ಟಿಗೆಗಳನ್ನು ತಂದು ಇಡಲಾರಂಭಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ರಾಪಂ ಕಚೇರಿ ಎದುರು ಹೆಣ ಸುಡುವಂತಿಲ್ಲ ಎಂದು ಹೇಳಿ ಧರಣಿನಿತರು ಮನವೊಳಿಸಿ ಕಟ್ಟಿಗೆಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು.

ಈ ವೇಳೆ ತಹಶೀಲ್ದಾರ್ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ ಧರಣಿನಿತರು ಇದುವರೆಗೂ ತಹಶೀಲ್ದಾರ್‌ಗೆ ಬೇಡಿಕೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ವಾರ್ಡ್‌ಸಭೆಗೆ ಬಹಿಷ್ಕಾರ: ಸ್ಮಶಾನ ಇಲ್ಲದೆ ಇರುವುದರಿಂದ ಸೋಮವಾರ ನಡೆಯಬೇಕಿದ್ದ ವಾರ್ಡ್ ಸಭೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ ಘಟನೆಯೂ ನಡೆಯಿತು. ಸ್ಮಶಾನ ಇಲ್ಲದೆ ಇರುವುದರಿಂದ ಈ ಪ್ರದೇಶದ ಜನರು ಮರಣ ಹೊಂದಿದರೆ ಸುಡಲು ಸ್ಮಶಾನ ಇಲ್ಲ. ಮೊದಲು ಅದನ್ನು ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಸ್ಮಶಾನಕ್ಕೆ ತಡೆ: ಈ ವೇಳೆ ಮಾತನಾಡಿದ ತಾಪಂ ಸದಸ್ಯ ದಿನೇಶ್ ಪಲಿಮಾರ್ ಈಗಾಗಲೇ ಸ್ಮಶಾನಕ್ಕೆ ಪಲಿಮಾರು ಗ್ರಾಪಂ ವ್ಯಾಪ್ತಿಯ ಅಡ್ವೆ ಪಲಿಮಾರು ರಸ್ತೆ ಪಕ್ಕದಲ್ಲಿ 1.5 ಜಾಗವನ್ನು ಮೀಸಲಿರಿಸಲಾಗಿದೆ. ಇದರಲ್ಲಿ 50 ಸೆಂಟ್ಸ್ ಸ್ಮಶಾನಕ್ಕೆ ಹಾಗೂ 50 ಸೆಂಟ್ಸ್ ತ್ಯಾಜ್ಯ ವಿಲೇವರಿ ಘಟಕಕ್ಕೆ ಎಂದು ಗುರುತಿಸಲಾಗಿದೆ. ಆದರೆ ಸ್ಥಳೀಯರಾದ ಪ್ರಕಾಶ್ ಶೆಟ್ಟಿ ಎಂಬವರು ಇದಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರಿಂದ ಸ್ವಲ್ಪಮಟ್ಟಿಗೆ ಸಮಸ್ಯೆ ಆಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುರ್ಟಾಡೊ, ಉಪಾಧ್ಯಕ್ಷ ಸುಮಂಗಳಾ ದೇವಾಡಿಗ, ಗ್ರಾಮ ಕರಣಿಕ ಲೋಕನಾಥ್, ಪಿಡಿಒ ಸತೀಶ್, ಪ್ರತಿಭಟನಾಕಾರರಾದ ಸುಧಾಕರ, ರವಿ, ದಿನೇಶ್, ರತ್ನಾಕರ್, ರಾಮ ಪಲಿಮಾರ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News