ಜೈಲಿನಲ್ಲಿರುವ ಇಬ್ಬರು ಎನ್‌ಸಿಪಿ ಶಾಸಕರಿಗೆ ಮತದಾನದ ಅವಕಾಶ

Update: 2017-07-17 12:38 GMT

ಮುಂಬೈ, ಜು.17: ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಜೈಲಿನಲ್ಲಿರುವ ಇಬ್ಬರು ಎನ್‌ಸಿಪಿ ಶಾಸಕರಿಗೆ ಅವಕಾಶ ಮಾಡಿಕೊಡಲಾಗಿದೆ.

 ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಮತ್ತು ರಮೇಶ್ ಕದಮ್ ಅವರಿಗೆ ಭ್ರಷ್ಟಾಚಾರದ ಅಪರಾಧಕ್ಕಾಗಿ ಜೈಲು ಶಿಕ್ಷೆ ವಿಧಿಸಲಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಇವರಿಬ್ಬರಿಗೂ ಅವಕಾಶ ಮಾಡಿಕೊಡಲಾಗಿದ್ದು ಅನಾರೋಗ್ಯದ ಕಾರಣ ಭುಜಬಲ್ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಕಟ್ಟಡಕ್ಕೆ ಕರೆದೊಯ್ದು ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಕದಮ್‌ರನ್ನು ಪೊಲೀಸ್ ವ್ಯಾನ್‌ನಲ್ಲಿ ಕರೆತರಲಾಯಿತು. ಆದರೆ ಇವರಿಬ್ಬರೂ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು.

ವಿವಿಧ ಹಣಚಲುವೆ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಪರಾಧಿಯಾಗಿರುವ ಭುಜಬಲ್ ಕಳೆದ 18 ತಿಂಗಳಿಂದ ಜಾರಿ ನಿರ್ದೇಶನಾಲಯ(ಇ.ಡಿ)ದ ಕಸ್ಟಡಿಯಲ್ಲಿದ್ದರೆ, 141 ಕೋಟಿ ರೂ. ಅವ್ಯವಹಾರ ನಡೆಸಿದ ಪ್ರಕರಣದಲ್ಲಿ ಅಪರಾಧಿಯಾಗಿರುವ ಕದಮ್ 2 ವರ್ಷಕ್ಕಿಂತಲೂ ಅಧಿಕ ಅವಧಿಯಿಂದ ಜೈಲಿನಲ್ಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ನಡೆಸಲು ಅವಕಾಶ ಮಾಡಿಕೊಡಬೇಕೆಂಬ ಇವರಿಬ್ಬರ ಮನವಿಯನ್ನು ಕಳೆದ ತಿಂಗಳು ಸಂಬಂಧಿತ ನ್ಯಾಯಾಲಯಗಳು ಪುರಸ್ಕರಿದ್ದು, ಇಬ್ಬರಿಗೂ ತಮ್ಮ ಹಕ್ಕನ್ನು ಚಲಾಯಿಸಲು ಸೂಕ್ತ ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News