ಶಿಕ್ಷಣದಷ್ಟೇ ಆರೋಗ್ಯ ರಕ್ಷಣೆಗೆ ಮಹತ್ವ: ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ, ಜು.17: ಕ್ರೈಸ್ತ ಧರ್ಮಸಭೆಯು ಶಿಕ್ಷಣದಷ್ಟೇ ಆರೋಗ್ಯ ರಕ್ಷಣೆಗೆ ಮಹತ್ವ ನೀಡುವುದರ ಮೂಲಕ ನೋವಿನಲ್ಲಿರುವವರಿಗೆ ಧ್ವನಿಯಾಗುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆ ಯನ್ನು ನೀಡುತ್ತಿದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ಉಡುಪಿ ಧರ್ಮಪ್ರಾಂತದ ಆರೋಗ್ಯ ಆಯೋಗ ಹಾಗೂ ಕರ್ನಾಟಕ ಪ್ರಾಂತೀಯ ಆರೋಗ್ಯ ಆಯೋಗ ಜಂಟಿ ಆಶ್ರಯದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಆರೋಗ್ಯ ನೀತಿ ಸವಾಲುಗಳು ಮತ್ತು ಕೆಥೊಲಿಕ್ ಬಿಷಪ್ಸ್ ಕಾನ್ಪರೆನ್ಸ್ ಆಫ್ ಇಂಡಿಯಾ ಇದರ ಆರೋಗ್ಯ ನೀತಿ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆಹಾರ, ಬಟ್ಟೆ, ವಸತಿ, ಶಿಕ್ಷಣ ಹಾಗೂ ಆರೋಗ್ಯ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಅವಶ್ಯಕತೆಗಳಾಗಿದ್ದು, ಅದನ್ನು ಪೂರೈಸುವಲ್ಲಿ ಸರಕಾರದ ಜೊತೆ ಜೊತೆಯಾಗಿ ಕ್ರೈಸ್ತ ಧರ್ಮಸಭೆ ಕೂಡ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದವರು ತಿಳಿಸಿದರು.
ಕರ್ನಾಟಕ ಪ್ರಾಂತೀಯ ಆರೋಗ್ಯ ಆಯೋಗದ ಕಾರ್ಯದರ್ಶಿ ವಂ. ಸಂತೋಷ್ ಡಾಯಸ್ ಮಾತನಾಡಿ, ಕೇಂದ್ರ ಸರಕಾರದ ಆರೋಗ್ಯ ಸೇವೆಯ ಬಳಿಕ ಭಾರತೀಯ ಕೆಥೊಲಿಕ್ ಆರೋಗ್ಯ ಸಂಸ್ಥೆ ವಿಸ್ತಾರವಾದ ಆರೋಗ್ಯ ಸೇವೆಯನ್ನು ದೇಶದಲ್ಲಿ ಹೊಂದಿದೆ. ಸುಮಾರು 21 ಮಿಲಿಯನ್ ಜನರಿಗೆ ಇದರ ಮೂಲಕ ಆರೋಗ್ಯ ಸೇವೆಯನ್ನು ನೀಡುತ್ತ ಬರಲಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗುವುದರೊಂದಿಗೆ ದೇಶದ ಆರೋಗ್ಯ ನೀತಿಯ ಪ್ರಕಾರ ಸರಕಾರದ ಸೇವೆಗಳನ್ನು ಸಹ ಸಾಮಾನ್ಯ ಹಾಗೂ ಬಡಜನರಿಗೆ ಲಭಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ ಎಂದರು.
ಆರೋಗ್ಯ ಆಯೋಗದ ಕಾರ್ಯದರ್ಶಿ ವಂ.ಮ್ಯಾಥ್ಯು ಪರಂಪಿಲ್, ಕರ್ನಾಟಕ ಪ್ರಾಂತೀಯ ಪಾಸ್ಟರಲ್ ಪ್ಲಾನ್ ಅನುಸ್ಠಾನ ಸಮಿತಿಯ ಸಂಚಾಲಕ ವಂ.ಲೂರ್ಡ್ ಕೆಥೊಲಿಕ್ ಶಿಕ್ಷಣ ಸೊಸೈಟಿಯ ಸ್ವಾಮಿ, ಕಾರ್ಯದರ್ಶಿ ವಂ.ಲಾರೆನ್ಸ್ ಡಿಸೋಜ ರಾಷ್ಟ್ರೀಯ ಆರೋಗ್ಯ ನೀತಿ 2017, ಸಿಬಿಸಿಐ ಆರೋಗ್ಯ ನೀತಿ ಕುರಿತು ಮಾಹಿತಿಗಳನ್ನು ಹಂಚಿಕೊಂಡರು. ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಫಾದರ್ ಮುಲ್ಲರ್ಸ್ ಸಂಸ್ಥೆಗಳ ನಿರ್ದೇಶಕ ವಂ.ರಿಚ್ಚರ್ಡ್ ಕುವೆಲ್ಲೊ, ಉಡುಪಿ ಶೋಕ ಮಾತಾ ಇಗರ್ಜಿಯ ಧರ್ಮಗುರು ವಂ. ವಲೇರಿ ಯನ್ ಮೆಂಡೊನ್ಸಾ, ಉಡುಪಿ ಧರ್ಮಪ್ರಾಂತದ ಪಾಲನಾ ಪರಿಷತ್ ಕಾರ್ಯದರ್ಶಿ ಅಲ್ಫೋನ್ಸ್ ಡಿಕೋಸ್ತ, ಆರೋಗ್ಯ ಆಯೋಗದ ಧರ್ಮ ಪ್ರಾಂತ್ಯದ ಪ್ರತಿನಿಧಿ ಡೋಲ್ಫಿ ಡಿಸೋಜ ಉಪಸ್ಥಿತರಿದ್ದರು.
ಡಾ.ಲೆಸ್ಲಿ ಲೂವಿಸ್ ಸ್ವಾಗತಿಸಿದರು. ಸಿಸ್ಟರ್ ಲೀನಾ ವಂದಿಸಿದರು. ಉಡುಪಿ ಧರ್ಮಪ್ರಾಂತದ ಆರೋಗ್ಯ ಆಯೋಗದ ನಿರ್ದೇಶಕ ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.