×
Ad

ಫೋಟೊ ವೈರಲ್ ಆದ ನಂತರ ಗಡ್ಡ ಬೋಳಿಸಲು ಮುಂದಾದ ಮೋದಿಯನ್ನು ಹೋಲುವ ವ್ಯಕ್ತಿ: ಕಾರಣವೇನು ಗೊತ್ತೇ?

Update: 2017-07-17 19:34 IST

ಪಯ್ಯನ್ನೂರು, ಜು.17: ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರನ್ನು ಹೋಲುವ ವ್ಯಕ್ತಿಯೊಬ್ಬರು ರೈಲು ನಿಲ್ದಾಣದಲ್ಲಿ ನಿಂತಿರುವ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೇ ಫೋಟೊದೊಂದಿಗೆ ಪ್ರಧಾನಿ ಮೋದಿಯವರ ಚಿತ್ರಕ್ಕೆ ಸ್ನ್ಯಾಪ್ ಚಾಟ್ ಡಾಗ್ ಫಿಲ್ಟರ್ ಬಳಸಿದ್ದಕ್ಕಾಗಿ ಆಲ್ ಇಂಡಿಯಾ ಬಕ್ಚೋದ್ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರಧಾನಿಯನ್ನು ಹೋಲುವ ಪಯ್ಯನ್ನೂರಿನ ರಾಮಚಂದ್ರನ್ ತಮ್ಮ ಗಡ್ಡ ಬೋಳಿಸಲು ಮುಂದಾಗಿದ್ದಾರೆ.

61 ವರ್ಷದ ರಾಮಚಂದ್ರನ್ ರನ್ನು ಕಂಡವರೆಲ್ಲಾ ಅವರ ಜೊತೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. “ಮುಂದಿನ ವಾರ ನಾನು ಗಡ್ಡ ಬೋಳಿಸುತ್ತೇನೆ. ಜನರು ನನ್ನ ಚಿತ್ರವನ್ನು ದುರ್ಬಳಕೆ ಮಾಡುತ್ತಿದ್ದಾರೆ” ಎಂದು ರಾಮಚಂದ್ರನ್ ಹೇಳಿದ್ದಾರೆ.

ರಾಮಚಂದ್ರನ್ ಅವರು ಪಯ್ಯನ್ನೂರಿನ ರೈಲ್ವೆ ನಿಲ್ದಾಣದಲ್ಲಿ ನಿಂತು ಮೊಬೈಲ್ ನೋಡುತ್ತಿರುವ ಚಿತ್ರವನ್ನು ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಈ ಚಿತ್ರ ವೈರಲ್ ಆಗಿತ್ತಲ್ಲದೆ, ಆಲ್ ಇಂಡಿಯಾ ಬಕ್ಚೋದ್ ಇದನ್ನು ಬೇರೆಯದೇ ರೀತಿ ಬಳಸಿ ಸಂಕಷ್ಟಕ್ಕೆ ಸಿಲುಕಿತ್ತು. ಮುಂಬೈ ಸೈಬರ್ ಪೊಲೀಸರು ಆಲ್ ಇಂಡಿಯಾ ಬಕ್ಚೋದ್ ಸ್ಥಾಪಕ ತನ್ಮಯ್ ಭಟ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.

ರಾಮಚಂದ್ರನ್ ಅವರು ಮೋದಿಯವರ ಅಭಿಮಾನಿ. ಹಲವು ವರ್ಷಗಳ ಕಾಲ ಗಲ್ಫ್ ನಲ್ಲಿ ದುಡಿದಿದ್ದ ಇವರು ಇದೀಗ ಊರಿನಲ್ಲಿದ್ದಾರೆ. ಮೋದಿ ಒಬ್ಬ ಸಮರ್ಥ ಆಡಳಿತಗಾರ ಎನ್ನುತ್ತಾರೆ ರಾಮಚಂದ್ರನ್. ಇದೀಗ ಅವರು ತಮ್ಮ ಚಿತ್ರವನ್ನು ದುರ್ಬಳಕೆ ಮಾಡಲಾಗುತ್ತದೆ ಎಂದು ಗಡ್ಡ ಬೋಳಿಸಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News