ವಿದೇಶಗಳಲ್ಲಿ ಅಕ್ರಮ ಸಂಪತ್ತು: ಶರೀಫ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಕೆ
ಇಸ್ಲಾಮಾಬಾದ್, ಜು. 17: ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಆರಂಭಿಸಿದೆ.
ಶರೀಫ್ ಮತ್ತು ಅವರ ಮಕ್ಕಳು ವಿದೇಶಗಳಲ್ಲಿ ಅಕ್ರಮ ಆಸ್ತಿಗಳನ್ನು ಹೊಂದಿದ್ದಾರೆ ಎಂಬುದಾಗಿ ಪನಾಮ ದಾಖಲೆಗಳು ಬಹಿರಂಗಪಡಿಸಿದ ಬಳಿಕ ಪಾಕ್ ಪ್ರಧಾನಿ ತನ್ನ ಹುದ್ದೆ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.
ಈ ಆರೋಪಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಜಂಟಿ ತನಿಖಾ ತಂಡ (ಜೆಐಟಿ)ವೊಂದನ್ನು ರಚಿಸಿದ್ದು, ಅದು ಈಗಾಗಲೇ ಶರೀಫ್‌ಗೆ ವಿರುದ್ಧವಾದ ವರದಿಯನ್ನು ಸಲ್ಲಿಸಿದೆ.
ಭ್ರಷ್ಟಾಚಾರ ಆರೋಪಗಳಲ್ಲಿ ಶರೀಫ್ ವಿಚಾರಣೆ ಎದುರಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಬಹುದು ಅಥವಾ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಲೂ ಬಹುದು ಎಂಬ ನಿರೀಕ್ಷೆಯನ್ನು ಹೆಚ್ಚಿನವರು ಹೊಂದಿದ್ದಾರೆ.
ಶರೀಫ್ ಕುಟುಂಬದ ಸಂಪತ್ತಿನ ಬಗ್ಗೆ ತನಿಖೆ ನಡೆಸಿದರುವ ಜೆ ಐಟಿ 254 ಪುಟಗಳ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.
ಶರೀಫ್ ಕುಟುಂಬ ಹೊಂದಿರುವ ಅಗಾಧ ಸಂಪತ್ತು ಕುಟುಂಬ ಸದಸ್ಯರ ಗೊತ್ತಿರುವ ಆದಾಯ ಮೂಲವನ್ನು ಮೀರಿದೆ ಎಂದು ವರದಿ ಹೇಳಿದೆ. ಅದೇ ವೇಳೆ, ಲಂಡನ್‌ನಲ್ಲಿರುವ ಭವ್ಯ ಫ್ಲಾಟ್‌ಗಳ ಒಡೆತನವನ್ನು ಮರೆಮಾಚಲು ಶರೀಫ್ ಪುತ್ರಿ ಮರ್ಯಮ್ ನವಾಝ್ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬುದಾಗಿಯೂ ಅದು ಆರೋಪಿಸಿದೆ.
ಜೆಐಟಿ ವರದಿಗೆ ಶರೀಫ್ ತಂಡದಿಂದ ಆಕ್ಷೇಪ
ಪನಾಮ ದಾಖಲೆಗಳು ಬಹಿರಂಗಪಡಿಸಿದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಜಂಟಿ ತನಿಖಾ ತಂಡ (ಜೆ ಐಟಿ) ಸಲ್ಲಿಸಿದ ಅಂತಿಮ ವರದಿಯು ಅಕ್ರಮ ಮತ್ತು ಪಕ್ಷಪಾತಪೂರಿತವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ರ ಕಾನೂನು ತಂಡ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಆಕ್ಷೇಪಣೆಯಲ್ಲಿ ಹೇಳಿದೆ.
ಶರೀಫ್ ಮತ್ತು ಅವರ ಮಕ್ಕಳ ವಿರುದ್ಧ ಭ್ರಷ್ಟಾಚಾರ ಮೊಕದ್ದಮೆ ದಾಖಲಿಸುವಂತೆ ಜೆಐಟಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ತನ್ನ ವರದಿಯಲ್ಲಿ ಶಿಫಾರಸು ಮಾಡಿರುವುದನ್ನು ಸ್ಮರಿಸಬಹುದಾಗಿದೆ.
‘‘ಜೆ ಐಟಿ ವರದಿಯು ಕಾನೂನು ವಿರೋಧಿ ಮಾತ್ರವಲ್ಲ, ದೇಶದ ಸಂವಿಧಾನದ ವಿರೋಧಿಯೂ ಆಗಿದೆ. ಹಾಗಾಗಿ, ಅದಕ್ಕೆ ಕಾನೂನು ಮಾನ್ಯತೆಯಿಲ್ಲ’’ ಎಂದು ಶರೀಫ್ ಪರ ವಕೀಲರು ವಾದಿಸಿದರು.