ಡಾ. ಸುಲೇಖಾ ವರದರಾಜ್ ಅವರಿಗೆ `ಡಾಕ್ಟರ್ ಆಫ್ ದಿ ಇಯರ್' ರಾಜ್ಯ ಪ್ರಶಸ್ತಿ
ಪುತ್ತೂರು,ಜು.17: ಇಲ್ಲಿನ ಕಾರ್ಮಿಕರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯೂ ಮಕ್ಕಳ ತಜ್ಞೆಯೂ ಆಗಿರುವ ಡಾ. ಸುಲೇಖಾ ವರದರಾಜ್ ಅವರಿಗೆ ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯ ಇ. ಎಸ್. ಐ. ವಿಭಾಗವು ಉತ್ತಮ ಸಾಧನೆಗಾಗಿ `ಡಾಕ್ಟರ್ ಆಫ್ ದಿ ಇಯರ್' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ. ಸುಲೇಖಾ ಅವರು ಇಲಾಖೆಯಲ್ಲಿ ಸಲ್ಲಿಸಿದ ಸೇವೆ, ವೈದ್ಯಕೀಯ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿದ ಸೇವೆ, ಪ್ರಕಟಗೊಳಿಸಿದ ವೈದ್ಯಕೀಯ ಬರಹಗಳು ಮತ್ತು ಹದಿಹರೆಯದ ಮಕ್ಕಳ ವರ್ತನೆ ಮತ್ತು ಭಾವನಾತ್ಮಕ ಸಮಸ್ಯೆಗೆ ನಡೆಸುವ ಕೌನ್ಸೆಲಿಂಗ್ ಮುಂತಾದ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ರಾಜಾಜಿನಗರದ ವೈದ್ಯಕೀಯ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ವೈದ್ಯಕೀಯ ನಿರ್ದೇಶಕರಾದ ಡಾ. ವನಜಾಕ್ಷಿ ಅವರು ಈ ಪಶಸ್ತಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಇಲಾಖೆಯ ವೈದ್ಯಕೀಯ ಉಪ ನಿರ್ದೇಶಕರಾದ ಡಾ. ಕುಮಾರ್ ಮತ್ತು ಇತರ ಅಧಿಕಾರಿಗಳೂ ಇಲಾಖೆಯ ಇತರ ವೈದ್ಯರುಗಳು ಉಪಸ್ಥಿತರಿದ್ದರು.
ಇಲ್ಲಿನ ಸರಕಾರಿ ಇ.ಎಸ್.ಐ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿರುವ ಡಾ. ಸುಲೇಖಾ ವರದರಾಜ್ ಅವರು ಮಕ್ಕಳ ತಜ್ಞರಾಗಿಯೂ ಮಕ್ಕಳ ಮನೋಚಿಕಿತ್ಸಕರಾಗಿದ್ದಾರೆ. ಇವರು ಸುಮಾರು ಹದಿನಾರು ಸಾವಿರ ಮಕ್ಕಳ ತಜ್ಞರನ್ನು ಒಳಗೊಂಡ ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ ಸಕ್ರಿಯ ಸದಸ್ಯರಾದ ಅವರು ಅಡೋಲೆಸೆಂಟ್ ವಿಭಾಗದ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು, ಮುಂಬಯಿ, ಆಗ್ರಾ ಮುಂತಾದೆಡೆಗಳಲ್ಲಿ ನಡೆದ ವೈದ್ಯಕೀಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಲ್ಪಟ್ಟಿದ್ದಾರೆ. ಇವರ ಹಲವಾರು ವೈದ್ಯಕೀಯ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಆಕಾಶವಾಣಿ ಮತ್ತು ಟಿವಿ ಮಾಧ್ಯಮಗಳಲ್ಲೂ ವೈದ್ಯಕೀಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.