×
Ad

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು: ಪದ್ಮನಾಭ ಕೊಂಕೋಡಿ ಆಗ್ರಹ

Update: 2017-07-17 20:14 IST

ಪುತ್ತೂರು,ಜು.17;  ಸಹಕಾರ ಭಾರತಿಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿರುವ ಕಡಬ ಸಿ.ಎ.ಬ್ಯಾಂಕ್‍ನ ಉಪಾಧ್ಯಕ್ಷ ರಮೇಶ್ ಕಲ್ಪುರೆ ಅವರ ಮೇಲೆ ಭಾನುವಾರ ಸಂಜೆ 10 ಮಂದಿಯ ತಂಡವೊಂದು ನಡೆಸಿದ ಹಲ್ಲೆ ಪ್ರಕರಣ ಖಂಡನೀಯವಾಗಿದ್ದು, ಕೇಂದ್ರ ಸರ್ಕಾರವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಸಹಕಾರ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಪದ್ಮನಾಭ ಕೊಂಕೋಡಿ ಆಗ್ರಹಿಸಿದ್ದಾರೆ. 

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಡಬ ಭಾಗದ ಸಮಾಜ ಸೇವಕರಾಗಿರುವ ರಮೇಶ್ ಕಲ್ಪುರೆ ಅವರ ಮೇಲೆ ಹತ್ತು ಮಂದಿ ಸೇರಿಕೊಂಡು ಹಲ್ಲೆ ನಡೆದಿರುವುದು ನೀಚ ಘಟನೆಯಾಗಿದ್ದು, ರಾಜ್ಯದಲ್ಲಿ ಅಮಾಯಕರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ, ಅಮಾಯಕರ ಕೊಲೆ, ಚೂರಿ ಇರಿತ ಪ್ರಕರಣಗಳಿಂದ ಜಿಲ್ಲೆ ಕಂಗೆಟ್ಟಿದೆ. ಇಲ್ಲಿ ಬಡಜನತೆ ಬದುಕುವುದೇ ಕಷ್ಟವಾಗಿದೆ ಎಂದರು.

ರಾಜ್ಯದಲ್ಲಿ ನಿರಂತರವಾಗಿ ಅತ್ಯಾಚಾರ, ಕೊಲೆ ಸುಲಿಗೆ ಪ್ರಕರಣಗಳು ನಡೆಯುತ್ತಿದ್ದರೂ ರಾಜ್ಯದಲ್ಲಿ ಗೃಹ ಸಚಿವರೇ ಇಲ್ಲ. ಎಲ್ಲದಕ್ಕೂ `ಸಿದ್ದರಾಮಯ್ಯ' ಎಂದು  ಲೇವಡಿ ಮಾಡಿದ ಅವರು ಕೊಲೆಯಲ್ಲೂ ರಾಜಕೀಯ ಮಾಡುವ ದುಷ್ಟ ಮಂತ್ರಿಗಳಿರುವ ಈ ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ. ರಾಜ್ಯದ ಪ್ರಜೆಗಳಿಗೆ ರಕ್ಷಣೆ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಅವರು ಆಗ್ರಹಿಸಿದರು.

ಜಿಲ್ಲೆಯಲ್ಲಿ ಅನ್ಯಾಯ ನಡೆಯುತ್ತಿದ್ದರೂ ಅದನ್ನು ಪ್ರತಿಭಟನೆ ನಡೆಸುವ ಹಾಗಿಲ್ಲ. ಕಳೆದ 54 ದಿನಗಳಿಂದ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ.  ಕಪ್ಪು ಪಟ್ಟಿ ಬಾಯಿಗೆ ಕಟ್ಟಿ ಕುಳಿತುಕೊಳ್ಳಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳನ್ನು ಪೇದೆಗಳಂತೆ ಜಿಲ್ಲೆಯ ಉಸ್ತುವಾರಿ ಸಚಿವರು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿದ್ದು, ಪೊಲೀಸರು ರಾಜಕೀಯ ಒತ್ತಡಗಳಿಂದಾಗಿ ಆರೋಪಿಗಳನ್ನು ಹಿಡಿಯುವ ಬದಲು ಅಮಾಯಕರ ಮೇಲೆ ಕೇಸು ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಮರ ಸಾಗಾಟ, ಮರಳು ಸಾಗಾಟದ ದಂಧೆಗಳು ನಿರಂತರವಾಗಿ ನಡೆಯುತ್ತಿದ್ದು,ಮಂತ್ರಿಗಳಿಗೆ ಕಪ್ಪ ಕೊಡುವ ಹಿನ್ನಲೆಯಿಂದ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವವರು ರಾಜಾರೋಷವಾಗಿ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದ ಪದ್ಮನಾಭ ಕೊಂಕೋಡಿ ಅವರು ಗಲಾಟೆ ಎಬ್ಬಿಸುವವರನ್ನು ಗಡಿಪಾರು ಮಾಡಿ ಎಂದು ಹೇಳುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ರಮೇಶ್ ಕಲ್ಪುರೆ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನೂ ಕೂಡಾ ಗಡಿಪಾರು ಮಾಡುವ ಕೆಲಸವನ್ನು ಮಾಡಿ ತೋರಿಸಲಿ ಎಂದರು.

ಸುದ್ದಿಗೋಷ್ಠಿಯಲ್ಲಿ  ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಉದಯಕುಮಾರ್ ರೈ ಮಾದೋಡಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ತಾಳ್ತಾಜೆ, ಜಿಲ್ಲಾ ಕಾರ್ಯದರ್ಶಿ ಪಾಂಡುರಂಗ ಹೆಗ್ಡೆ, ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News