ದೂರದ ನಕ್ಷತ್ರದಿಂದ ಬರುತ್ತಿರುವ ನಿಗೂಢ ಸಂಕೇತಗಳು
ವಾಶಿಂಗ್ಟನ್, ಜು. 17: ಭೂಮಿಯಿಂದ ಸುಮಾರು 11 ಜ್ಯೋತಿರ್ವರ್ಷ ದೂರದಲ್ಲಿರುವ ಸಣ್ಣ ಹಾಗೂ ಮಂದ ನಕ್ಷತ್ರವೊಂದರ ದಿಕ್ಕಿನಿಂದ ಬರುತ್ತಿರುವ ನಿಗೂಢ ರೇಡಿಯೊ ಸಂಕೇತಗಳನ್ನು ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಕೆಂಪು ಕುಬ್ಜ ನಕ್ಷತ್ರ ‘ರಾಸ್ 128(ಜಿಜೆ447)’ರಿಂದ ಸಂಕೇತಗಳು ಬಂದಿವೆ. ಈ ನಕ್ಷತ್ರವು ಸೂರ್ಯನಿಂದ ಸುಮಾರು 2,800 ಪಟ್ಟು ಮಂದವಾಗಿದೆ ಹಾಗೂ ಅದು ಯಾವುದೇ ಗ್ರಹಗಳನ್ನು ಹೊಂದಿರುವುದು ಈವರೆಗೆ ಗಮನಕ್ಕೆ ಬಂದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ‘ವಿಚಿತ್ರ’ ಸಂಕೇತಗಳನ್ನು ಪೋರ್ಟರಿಕೊ ವಿಶ್ವವಿದ್ಯಾನಿಲಯದ ಖಗೋಳ ಶಾಸ್ತ್ರಜ್ಞರು ‘ಅರೆಸಿಬೊ ವೀಕ್ಷಣಾಲಯ’ವನ್ನು ಬಳಸಿ ಪತ್ತೆಹಚ್ಚಿದ್ದಾರೆ.
ಬೃಹತ್ ರೇಡಿಯೊ ದೂರದರ್ಶಕ ಅರೆಸಿಬೊ ವೀಕ್ಷಣಾಲಯವನ್ನು ಪೋರ್ಟರಿಕೊದ ಭೂಮಿಯಡಿಯ ಬೃಹತ್ ಗುಂಡಿಯಲ್ಲಿ ನಿರ್ಮಿಸಲಾಗಿದೆ.
ಈ ಸಂಕೇತಗಳು ಬಾಹ್ಯಾಕಾಶದ ಬುದ್ಧಿವಂತ ಜೀವಿಗಳಿಂದ ಬಂದಿರುವ ಸಾಧ್ಯತೆ ಇಲ್ಲವಾದರೂ, ತಳ್ಳಿಹಾಕುವಂತಿಲ್ಲ ಎಂದು ಅರೆಸಿಬೊದಲ್ಲಿರುವ ಪೋರ್ಟರಿಕೊ ವಿಶ್ವವಿದ್ಯಾನಿಲಯದ ಖಗೋಳಜೀವಶಾಸ್ತ್ರಜ್ಞ ಅಬೆಲ್ ಮೆಂಡಿಝ್ ಹೇಳುತ್ತಾರೆ.