×
Ad

ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ ಆರೋಪ : ಮೂಡುಬಿದಿರೆ ಬಿಜೆಪಿ ಮುಖಂಡನ ವಿರುದ್ಧ ದೂರು

Update: 2017-07-17 22:21 IST
ಡೆನಿಸ್ ಮಿನೇಜಸ್

ಮೂಡುಬಿದಿರೆ,ಜು.17 : ಮೂಡುಬಿದಿರೆಯ ಖ್ಯಾತ ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡರೋರ್ವರ ಮೇಲೆ ವ್ಯಕ್ತಿಯೋರ್ವರಿಗೆ ಶಾಂತಿ ಭಂಗದ ಉದ್ದೇಶದಿಂದ ಅವಮಾನ, ಬೆದರಿಕೆ, ಮತ್ತು ಹಲ್ಲೆ ನಡೆಸಿರುವ ಕುರಿತು ಮೂಡುಬಿದಿರೆ ಠಾಣೆಯಲ್ಲಿ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ತೋಡಾರು ಕಾಪಿಕಾಡು, ಕಲ್ಲೆಪದವು ನಿವಾಸಿ ಡೆನಿಸ್ ಮಿನೇಜಸ್(59) ಎಂಬವರೇ ದೂರು ನೀಡಿದ ವ್ಯಕ್ತಿಯಾಗಿದ್ದು ತನ್ನ ಮನೆ ಸಮೀಪದ ನಿವಾಸಿಯಾಗಿರುವ ನ್ಯಾಯವಾದಿ ಶಾಂತಿ ಪ್ರಸಾದ್ ಜೈನ್ ತನ್ನ ಮೇಲೆ ಹಲ್ಲೆ ನಡೆಸಿ, ಬೆದರಿಕೆ ನೀಡಿ, ರಿವಾಲ್ವರ್ ತೆಗೆದು ಕೊಲ್ಲುವುದಾಗಿ ಬೆದರಿಸಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ದೂರುದಾರ ಡೆನಿಸ್ ಮಿನೇಜಸ್ ಅವರು ಶಾಂತಿ ಪ್ರಸಾದ್ ಜೈನ್‍ರವರ ಮನೆ ತೋಟದಲ್ಲಿದ್ದ ಕೃಷಿ ಕಾರ್ಮಿಕರನ್ನು ತನ್ನ ಮನೆಯ ಕೃಷಿ ಕೆಲಸಕ್ಕೆ ಕರೆದೊಯ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಡೆನಿಸ್ ತನ್ನ ಕಾರಿನಲ್ಲಿ ತನ್ನ ಮನೆಯ ಕಡೆ ಹೋಗುತ್ತಿದ್ದ ಸಂದರ್ಭ ತನ್ನ ಕಾರಿನಲ್ಲಿ ಬಂದ ಶಾಂತಿಪ್ರಸಾದ್ ಜೈನ್ ಡೆನಿಸ್‍ರ ಕಾರಿಗೆ ಅಡ್ಡ ನಿಲ್ಲಿಸಿ ತಡೆಹಿಡಿದಿದ್ದಾರೆ.

ಕಾರಿನಿಂದ ಇಳಿದು ಬಂದ ಶಾಂತಿ ಪ್ರಸಾದ್ ಡೆನಿಸ್‍ರನ್ನು ಕಾರಿನಿಂದ ಎಳೆದು ಕುತ್ತಿಗೆ ಅದುಮಿದ್ದಾರೆ. ಮಾತ್ರವಲ್ಲದೆ ಅಲ್ಲೇ ಇದ್ದ ದೊಡ್ಡ ಕಲ್ಲನ್ನು ಎತ್ತಿ ಡೆನಿಸ್ ತಲೆಗೆ ಹಾಕಲು ಯತ್ನಿಸಿ, ತನ್ನ ಕಾರಿನಿಂದ ರಿವಾಲ್ವರ್ ತೆಗೆದು ನಿನ್ನ ಉಳಿಸುವುದಿಲ್ಲ ಎಂದು ಬೆದರಿಸಿರುವುದಾಗಿ ಡೆನಿಸ್ ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ದೂರು ಸ್ವೀಕರಿಸಿರುವ ಮೂಡುಬಿದಿರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News