ಶರತ್ ಹತ್ಯೆ : ರಾಜಶೇಖರಾನಂದ ಸ್ವಾಮೀಜಿಯಿಂದ ಲಿಖಿತ ಹೇಳಿಕೆ ಸಲ್ಲಿಕೆ
ಬಂಟ್ವಾಳ, ಜು.17: ಬಿ.ಸಿ.ರೋಡಿನಲ್ಲಿ ಇತ್ತೀಚೆಗೆ ನಡೆದ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಬಳಿ ಸ್ಫೋಟಕ ಮಾಹಿತಿ ಇದೆ ಎಂದು ಹೇಳಿಕೆ ನೀಡಿದ್ದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರ ಪರ ವಕೀಲರು ಸೋಮವಾರ ಬಂಟ್ವಾಳ ನಗರ ಠಾಣೆಗೆ ಆಗಮಿಸಿ ಸ್ವಾಮಿ ಅವರ ಲಿಖಿತ ಹೇಳಿಕೆಯನ್ನು ತನಿಖಾಧಿಕಾರಿಗೆ ಹಸ್ತಾಂತರಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಶರತ್ ಹತ್ಯೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸ್ವಾಮಿ ಶರತ್ ಹತ್ಯೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿ ನನ್ನ ಬಳಿ ಇದ್ದು, ರಾಷ್ಟ್ರೀಯ ತನಿಖಾ ತಂಡಕ್ಕೆ ಇದನ್ನು ಒದಗಿಸುವುದಾಗಿ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿ ಬಂಟ್ವಾಳ ಠಾಣೆಗೆ ಆಗಮಿಸಿ ತನಿಖೆಗೆ ಹಾಜರಾಗುವಂತೆ ಸ್ವಾಮೀಜಿಗೆ ನೋಟಿಸ್ ಜಾರಿಗೊಳಿಸಿದ್ದರು. ಸೋಮವಾರ ಸ್ವಾಮಿ ಪರ ವಕೀಲರು ಠಾಣೆಗೆ ಆಗಮಿಸಿ ಈ ಲಿಖಿತ ಹೇಳಿಕೆ ಹಸ್ತಾಂತರಿಸಿದ್ದಾರೆ.
ಲಿಖಿತ ಹೇಳಿಕೆಯನ್ನು ಹಸ್ತಾಂತರಿಸಿದ ರಾಜಶೇಖರಾನಂದ ಸ್ವಾಮೀಜಿ ಅವರ ಪರ ವಕೀಲ ಮಹೇಶ್ ಕಜೆ ಮಾತನಾಡಿ ಬಿ.ಸಿ.ರೋಡಿನಲ್ಲಿ ನಡೆದ ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ವೈಫಲ್ಯ ಹಾಗೂ ಅದಕ್ಕೆ ಪೂರಕವಾದ ಸ್ಥಳೀಯ ಅಂಶಗಳನ್ನು ಜನ ಸಾಮಾನ್ಯರು ಹೇಳಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಸ್ವಾಮೀಜಿಯೋರ್ವರು ನಿರ್ಭಯವಾಗಿ ಹೇಳಿಕೆ ನೀಡಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಬೇಕಾದ ಮಾಹಿತಿಯನ್ನು ಈಗಾಗಲೇ ತನಿಖಾಧಿಕಾರಿಗೆ ನೀಡಲಾಗಿದೆ ಎಂದರು.
ಲಿಖಿತ ಹೇಳಿಕೆಯಲ್ಲಿ ಏನಿತ್ತು?
ಘಟನೆಗೆ ಸಂಬಂಧಪಟ್ಟಂತೆ ರಾಜಶೇಖರಾನಂದ ಸ್ವಾಮಿ ಅವರಿಗೆ ಸಿಆರ್‌ಪಿಸಿ 160 ರ ಪ್ರಕಾರ ಜು.17 ರಂದು ಠಾಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ದಿನ ಅವರ ಪರ ವಕೀಲರು ಠಾಣೆಗೆ ಆಗಮಿಸಿ ಲಿಖಿತ ಸಮಜಾಯಿಷಿ ನೀಡಿದ್ದು, ಆಷಾಢ ಮಾಸ ಪ್ರಾರಂಭವಾಗಿರುವುದರಿಂದ ಪೂಜೆ ಪುನಸ್ಕಾರಗಳು ಇರುವುದರಿಂದ ಠಾಣೆಗೆ ಖುದ್ದು ಹಾಜರಾಗಲು ಸಾಧ್ಯವಿಲ್ಲ. ಆದುದರಿಂದ ನನ್ನ ಪೂಜೆ-ಪುನಸ್ಕಾರಗಳಿಗೆ ಅಡ್ಡಿ ಉಂಟು ಮಾಡಬಾರದು ಎಂದು ವಕೀಲರು ನೀಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್ ಪತ್ರಿಕೆಗೆ ತಿಳಿಸಿದ್ದಾರೆ.