ನಿಡ್ಡೋಡಿ : ದನ ಕರುಗಳನ್ನು ಬಲಿ ಪಡೆದ ಚಿರತೆ
ಮೂಡುಬಿದಿರೆ,ಜು.17 : ಚಿರತೆಯ ದಾಳಿಗೆ ತುತ್ತಾಗಿ 2 ದನಗಳು ಮತ್ತು 2 ಕರುಗಳು ಬಲಿಯಾದ ಘಟನೆ ಸೋಮವಾರ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಬಂಗೇರಪದವಿನಲ್ಲಿ ನಡೆದಿದೆ.
ಬಂಗೇರಪದವಿನ ರಾಮಪ್ಪ ಗೌಡ ಎಂಬವರು ತಮ್ಮ ದನಕರುಗಳನ್ನು ಸಮೀಪದ ಗುಡ್ಡೆಗೆ ಮೇಯಲೆಂದು ಬಿಟ್ಟಿದ್ದರು. ಆದರೆ ರಾತ್ರಿಯಾದರೂ ಮನೆಗೆ ಬರದೇ ಇದ್ದುದರಿಂದ ಮರುದಿನ ಹುಡುಕಾಟ ನಡೆಸಿದ ಸಂದರ್ಭ ಚಿರತೆಗೆ ಬಲಿಯಾಗಿರುವುದು ಪತ್ತೆಯಾಗಿದೆ.
ಮೂಲ್ಕಿ ಯದುನಾರಾಯಣ ಶೆಟ್ಟಿ ಎಂಬವರಿಗೆ ಸೇರಿರುವ ಬಂಗೇರಪದವಿನ ಬೋಂಟಲ್ಕೆ ಪ್ರದೇಶದಲ್ಲಿರುವ ರಬ್ಬರ್ ತೋಟದಲ್ಲಿ ಚಿರತೆ ಅರ್ಧತಿಂದು ಬಿಟ್ಟುಹೋಗಿರುವ ಸ್ಥಿತಿಯಲ್ಲಿ ಹಸುಗಳ ಕಳೇಬರ ಲಭ್ಯವಾಗಿದ್ದು, ಇನ್ನೊಂದು ಕರುವಿನ ಕುರುಹು ಕೂಡ ಇರಲಿಲ್ಲ.
ಮೂಡುಬಿದಿರೆ ವಲಯಾರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಕಿನ್ನಿಗೋಳಿ ಘಟಕದ ಉಪ ವಲಯಾರಣ್ಯಾಧಿಕಾರಿ ಕೀರ್ತಿ ಮ್ಯಾಥ್ಯು ಮತ್ತು ಅರಣ್ಯ ರಕ್ಷಕ ಶಂಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾ.ಪಂ ಸದಸ್ಯರಾದ ಜೋಕಿಂ ಕೊರೆಯಾ, ರಾಮ ಗೌಡ, ಸ್ಥಳೀಯರಾದ ಪುರುಷೋತ್ತಮ ಗೌಡ, ಸುಭಾಷ್ ಮತ್ತಿತರರು ಈ ಸಂದರ್ಭದಲ್ಲಿದ್ದರು.