ವಿಕಿಪೀಡಿಯಾ ಕಾರ್ಯಾಗಾರ ಸಮಾಪನ
ಮೂಡುಬಿದಿರೆ,ಜು.17: ವಿಕಿಪೀಡಿಯಾಕ್ಕೆ ಲೇಖನಗಳನ್ನು ಯಾರು ಬೇಕಾದರು ಬರೆಯಬಹುದು ಆದರೆ 'ವಿಕಿಪೀಡಿಯಾ ಅಸೋಸಿಯೇಷನ್' ಮೂಲಕ ತರಬೇತಿ ಪಡೆದು ಲೇಖನಗಳನ್ನು ಬರೆದು ಪ್ರಕಟಿಸಿದಾಗ ಕನ್ನಡ, ತುಳು ಮತ್ತು ಕೊಂಕಣಿ ಭಾಷೆಯ ಬೆಳವಣಿಗೆಗೆ ಪೂರಕವಾಗುತ್ತದೆ. ಇದಕ್ಕಾಗಿ ಶ್ರಮಿಸುವ ಕಾರ್ಯಾಗಾರಗಳು ಪ್ರಮುಖವೆನಿಸುವುದರ ಜತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದು ಕರಾವಳಿ ವಿಕಿಮೀಡಿಯನ್ಸ್ ಅಧ್ಯಕ್ಷ ಡಾ.ವಿಶ್ವನಾಥ ಬದಿಕಾನ ಅಭಿಪ್ರಾಯಪಟ್ಟರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಿನಗಳು ನಡೆದ `ವಿಕಿಪೀಡಿಯಾ ಅಸೋಸಿಯೇಷನ್' ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿ, ಭಾರತದಲ್ಲಿನ ಪ್ರಥಮ ವಿಕಿಪೀಡಿಯಾ ಅಸೋಸಿಯೇಷನ್' ಆಳ್ವಾಸ್ ಕಾಲೇಜಿನಲ್ಲಿ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳಿಂದ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿಸಿದೆ. ಮಾಹಿತಿಯನ್ನು ವಿಶ್ವದಾದ್ಯಂತ ಪಸರಿಸುವುದು ಪುಣ್ಯಕಾರ್ಯವಾಗಿದ್ದು ಕರಾವಳಿಯ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಉತ್ತಮ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕರಾವಳಿ ವಿಕಿಮೀಡಿಯನ್ಸ್ ಕಾರ್ಯದರ್ಶಿ, ವಿಶ್ವಕನ್ನಡ.ಕಾಮ್ ಸಂಪಾದಕ ಡಾ. ಯು.ಬಿ ಪವನಜ ಮಾತನಾಡಿ, ವಿಕಿಪೀಡಿಯಾಗೆ ಲೇಖನಗಳನ್ನು ಬರೆಯಲು ವಿದ್ಯಾರ್ಥಿಗಲು ಬಳಸುವುದು ಕನ್ನಡ ಲಿಪಿಯಾಗಿದ್ದು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗಪಡಿಸಿಕೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿತು ಬರುವ ವಿದ್ಯಾರ್ಥಿಗಳು ಭಾಷೆಯ ಬಗೆಗಿನ ಕೀಳರಿಮೆ ತೊರೆದು ಸ್ವಭಾಷಾಭಿಮಾನ ಮತ್ತು ಸ್ವಇಚ್ಛೆಯಿಂದ ಲೇಖನಗಳನ್ನು ಬರೆಯುವಂತಾಗಬೇಕು. ಈ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮಂಗಳೂರಿನ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಕರಾವಳಿ ವಿಕಿಮೀಡಿಯನ್ಸ್ ಕೋಶಾಧಿಕಾರಿ ಡಾ. ಕಿಶೋರ್ ಕುಮಾರ್ ರೈ ಶೇಣಿ ಉಪಸ್ಥಿತರಿದ್ದರು.
ವಿಕಿಪೀಡಿಯಾ ಅಸೋಸಿಯೇಷನ್ ಸಂಯೊಜಕ ಅಶೋಕ್‍ಕುಮಾರ್ ಕೆ.ಜಿ ಪ್ರಸ್ತಾವಿಸಿ, ಸ್ವಾಗತಿಸಿದರು. ಸಮಾರೋಪದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿ ಕು. ಧನಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು. ಡಾ. ಪ್ರವಿಣ್‍ಚಂದ್ರ ವಂದಿಸಿದರು.