×
Ad

ಆಧಾರ್ ಮತ್ತು ಖಾಸಗಿತನದ ಹಕ್ಕು: ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

Update: 2017-07-18 19:30 IST

ಹೊಸದಿಲ್ಲಿ, ಜು.18: ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಖಾಸಗಿತನ ಎಂಬುದು ಮೂಲಭೂತ ಹಕ್ಕು ಆಗಿದೆಯೇ ಮತ್ತು ಇದು ಸಂವಿಧಾನದ ಮೂಲ ಸ್ವರೂಪದ ಭಾಗವಾಗಿದೆಯೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠವೊಂದು ಬುಧವಾರ ವಿಚಾರಣೆ ನಡೆಸಲಿದೆ.

ದೈಹಿಕ ಗುರುತಿನ ವಿವರ ಹೊಂದಿರುವ ಆಧಾರ್ ಗುರುತು ಪತ್ರ ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವೊಂದು ಈ ನಿರ್ಧಾರ ಕೈಗೊಂಡಿದೆ.

 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ಕೆಲ ಸಮಯದಲ್ಲೇ ಎಂ.ಪಿ.ಶರ್ಮ ತೀರ್ಪಿನಲ್ಲಿ (ಎಂಟು ನ್ಯಾಯಮೂರ್ತಿಗಳಿದ್ದ ಪೀಠ) ಸುಪ್ರೀಂಕೋರ್ಟ್ ನೀಡಿದ ಆದೇಶ ಹಾಗೂ 1962ರಲ್ಲಿ ಖರಕ್ ಸಿಂಗ್ ತೀರ್ಪಿನಲ್ಲಿ (ಆರು ನ್ಯಾಯಮೂರ್ತಿಗಳಿದ್ದ ಪೀಠ) ನೀಡಿದ ಆದೇಶಗಳೆರಡರಲ್ಲೂ ಖಾಸಗಿತನ ಎಂಬುದು ಮೂಲಭೂತ ಅಥವಾ ಖಾತರಿಯಾದ ಹಕ್ಕು ಅಲ್ಲ ಎಂದು ಹೇಳಲಾಗಿದೆ. ಅದಾಗ್ಯೂ ಕಳೆದ ಹಲವಾರು ವರ್ಷಗಳಿಂದ ಕೆಲವು ಸಣ್ಣ ನ್ಯಾಯಪೀಠಗಳು ಖಾಸಗಿತನ ಎಂಬುದು ಸಂವಿಧಾನದ ಮೂಲ ಆಶಯವಾಗಿದೆ ಎಂಬ ನಿಲುವಿಗೆ ಬಂದಿವೆ.

 ಇದೀಗ ಈ ಗೊಂದಲಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂಬತ್ತು ನ್ಯಾಯಮೂರ್ತಿಗಳನ್ನು ಹೊಂದಿರುವ ನ್ಯಾಯಪೀಠವೊಂದನ್ನು ರಚಿಸಲಾಗಿದೆ. ಭಾರತೀಯ ಸಂವಿಧಾನದಲ್ಲಿ ಖಾಸಗಿತನ ಎಂಬುದು ಮೂಲಭೂತ ಹಕ್ಕು ಆಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವ ಅಗತ್ಯವಿದೆ. ಎಂ.ಪಿ.ಶರ್ಮ ಮತ್ತು ಖರಕ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಸಂವಿಧಾನದ ಬಗ್ಗೆ ಸೂಕ್ತವಾಗಿ ಉಲ್ಲೇಖಿಸಲಾಗಿದೆಯೇ ಎಂಬುದನ್ನೂ ಪರಿಗಣಿಸಬೇಕಿದೆ ಎಂದು ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ತಿಳಿಸಿದ್ದಾರೆ.

ಮೊದಲು ಖಾಸಗಿತನದ ಹಕ್ಕು ಸಂವಿಧಾನದತ್ತ ಹಕ್ಕು ಆಗಿದೆಯೇ ಎಂಬುದನ್ನು ನಿರ್ಧರಿಸಬೇಕಿದೆ. ಆ ಬಳಿಕ ಆಧಾರ್ ವಿಷಯದ ಬಗ್ಗೆ ನಿರ್ಧರಿಸಲಾಗುವುದು ಎಂದು ಜೆ.ಎಸ್.ಖೇಹರ್ ಹೇಳಿದ್ದಾರೆ. ನಮ್ಮಲ್ಲಿ ಲಿಖಿತ ಸಂವಿಧಾನವಿದ್ದು ಖಾಸಗಿತನ ಮೂಲಭೂತ ಹಕ್ಕು ಅಲ್ಲ ಎಂದು ಪರಿಗಣಿಸಲು ತೊಡಕಾಗಿದೆ. ಇದನ್ನು ನಿರ್ಲಕ್ಷಿಸುವಂತಿಲ್ಲ. ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಖೇಹರ್ ಹೇಳಿದರು.

 ಖಾಸಗಿತನಕ್ಕೆ ಸಾಮಾನ್ಯವಾದ ಕಾನೂನು ಹಕ್ಕನ್ನು ನೀಡಲಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿದರು. ಸಂವಿಧಾನದ ನಿರ್ಮಾತೃರು ದೇಶದ ಪ್ರಜೆಗಳಿಗೆ ಎಲ್ಲಾ ಮೂಲಭೂತ ಹಕ್ಕನ್ನು ನೀಡಿದ್ದಾರೆ. ಆದರೆ ‘ಖಾಸಗಿತನದ ಹಕ್ಕ’ನ್ನು ಪ್ರಜ್ಞಾಪೂರ್ವಕವಾಗಿ ದೂರ ಇಟ್ಟಿದ್ದಾರೆ ಎಂದವರು ಹೇಳಿದರು.

 ಖಾಸಗಿತನ ಎಂಬುದು ಮಾರ್ಪಡಿಸಲಾಗದ ಮಾನವ ಹಕ್ಕು ಎಂದು ವಿಶ್ವಸಂಸ್ಥೆಯ ಮಾನವಹಕ್ಕು ನಿರ್ಣಯದಲ್ಲಿ ಹೇಳಲಾಗಿದೆ ಎಂದು ಅರ್ಜಿದಾರರ ಪರ ವಕೀಲರಲ್ಲಿ ಒಬ್ಬರಾದ ಗೋಪಾಲ್ ಸುಬ್ರಮಣಿಯಂ ಹೇಳಿದರು. ಖಾಸಗಿತನದ ಹಕ್ಕನ್ನು ಸಾಮಾನ್ಯವಾದ ಹಕ್ಕು ಎಂದು ವಿಂಗಡಿಸುವುದು ನಿರುತ್ಸಾಹಕರ ಪ್ರಕ್ರಿಯೆ ಎಂದವರು ಅಭಿಪ್ರಾಯಪಟ್ಟರು.

ಆಧಾರ್ ಕುರಿತ ಪ್ರಕರಣದ ವಿಚಾರಣೆಯನ್ನು ಜುಲೈ 12ರಂದು ಐವರು ಸದಸ್ಯರ ನ್ಯಾಯಪೀಠಕ್ಕೆ ವಹಿಸಲಾಗಿತ್ತು. ಆಧಾರ್ ಬಗ್ಗೆ ಸಲ್ಲಿಸಲಾದ ಅರ್ಜಿಯನ್ನು 2015ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವೊಂದಕ್ಕೆ ವಹಿಸಲಾಗಿತ್ತು. ಆದರೆ ಅರ್ಜಿದಾರರ ಹಲವು ಜ್ಞಾಪಕಪತ್ರಗಳ ಬಳಿಕವೂ ಈ ವಿಚಾರಣೆ ಮುಂದೆ ಸಾಗಲಿಲ್ಲ. ಬಳಿಕ , ಸರಕಾರದ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯಗೊಳಿಸುವ ಮೂಲಕ ಓರ್ವ ವ್ಯಕ್ತಿ ತನ್ನ ಖಾಸಗಿತನದ ಹಕ್ಕನ್ನು ತ್ಯಜಿಸಿದಂತಾಗುವುದಿಲ್ಲವೇ ಎಂಬ ಬಗ್ಗೆ 2015ರ ಅಕ್ಟೋಬರ್ 7ರಂದು ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗಾಗಿ ಸುಪ್ರೀಂಕೋರ್ಟ್ ಸಂವಿಧಾನ ಪೀಠಕ್ಕೆ ವಹಿಸಿತು.

  ಇತ್ತೀಚಿಗೆ ಆಧಾರ್‌ಗೆ ನೀಡಲಾಗಿದ್ದ ಸಾಂವಿಧಾನಿಕ ಮಾನ್ಯತೆಯನ್ನು ಮತ್ತು ಪಾನ್ ಕಾರ್ಡ್‌ಗೆ ಆಧಾರ್ ಜೋಡಣೆಯ ನಿರ್ಧಾರವನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು. ಆಧಾರ್ ಕಡ್ಡಾಯವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿ ಸಲ್ಲಿಕೆಯಾಗಿದ್ದು , ಇದರಲ್ಲಿ ಎನ್‌ಸಿಪಿಸಿಆರ್ ಅಧ್ಯಕ್ಷೆ , ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಶಾಂತಾ ಸಿನ್ಹ ಅವರ ಅರ್ಜಿಯೂ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News