×
Ad

ಪಾಕ್ ಬಾಲಕನಿಗೆ ಶಸ್ತ್ರಚಿಕಿತ್ಸೆ: ಸುಷ್ಮಾ ಸ್ವರಾಜ್‌ಗೆ ತಂದೆಯ ಕೃತಜ್ಞತೆ

Update: 2017-07-18 19:36 IST

ನೋಯ್ಡ, ಜು.18: ನೋಯ್ಡದ ಆಸ್ಪತ್ರೆಯಲ್ಲಿ ಪಾಕಿಸ್ತಾನದ ನಾಲ್ಕು ತಿಂಗಳ ಮಗುವಿಗೆ  ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಈ ಬಗ್ಗೆ ಬಾಲಕನ ತಂದೆ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪಾಕಿಸ್ತಾನದ ಕಮಲ್ ಸಿದ್ದಿಕಿ ಎಂಬವರ ನಾಲ್ಕು ತಿಂಗಳ ಶಿಶು ರೊಹಾನ್ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ಈ ಮಗುವಿಗೆ ಉ.ಪ್ರದೇಶದ ನೋಯ್ಡಿದಲ್ಲಿರುವ ಜೇಪೀ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲು ವ್ಯವಸ್ಥೆ ಮಾಡುವುದಾಗಿ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದರು. ಅದರಂತೆ ಜುಲೈ 12ರಂದು ನೋಯ್ಡಾಕ್ಕೆ ಆಗಮಿಸಿದ ಸಿದ್ದಿಕಿ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಜುಲೈ 14ರಂದು ಡಾ ರಾಜೇಶ್ ಶರ್ಮ ನೇತೃತ್ವದಲ್ಲಿ ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆ ನಡೆಸಿದೆ. ಈ ಬಾಲಕನ ಹೃದಯದ ಎಡಭಾಗದಲ್ಲಿ ತೂತಿದ್ದ ಕಾರಣ ರಕ್ತಹೀನತೆಯಿಂದ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಶಸ್ತ್ರಚಿಕಿತ್ಸೆಯಿಂದ ಈ ಸಮಸ್ಯೆ ಪರಿಹರಿಸಲಾಗಿದೆ. ಇದೀಗ ಮಗು ಚೇತರಿಸಿಕೊಂಡಿದೆ ಎಂದು ಡಾ ಶರ್ಮ ತಿಳಿಸಿದ್ದಾರೆ.

ಇಂದು ನನ್ನ ಮಗುವಿನ ಹೃದಯ ಮೇಡಂ ಸುಷ್ಮಾ ಸ್ವರಾಜ್ ಅವರಿಗಾಗಿ ಮಿಡಿಯುತ್ತಿದೆ. ಈ ಮಗುವಿಗೆ ಮಾಡಿದ ಉಪಕಾರದ ರೀತಿಯಲ್ಲೇ, ವೈದ್ಯಕೀಯ ವೀಸಕ್ಕಾಗಿ ಕಾಯುತ್ತಿರುವ ಸಾವಿರಾರು ಪಾಕ್ ಪ್ರಜೆಗಳಿಗೂ ಸುಷ್ಮಾ ಸ್ವರಾಜ್ ನೆರವಾಗಲಿ ಎಂದು ಸಿದ್ದಿಕಿ ಮನವಿ ಮಾಡಿದ್ದಾರೆ. ಇದೀಗ ಈ ಮಗುವಿನ ಸಹಿತ ಪೋಷಕರು ಪಾಕ್‌ಗೆ ಮರಳಿದ್ದಾರೆ.

    ಭಾರತ-ಪಾಕ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಭಾರತಕ್ಕೆ ತೆರಳಿ ನನ್ನ ಮಗುವಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ವೀಸ ದೊರೆಯುತ್ತಿಲ್ಲ ಎಂದು ಮೇ 22ರಂದು ಅಸಹಾಯಕತೆ ವ್ಯಕ್ತಪಡಿಸಿದ್ದ ಸಿದ್ದಿಕಿ, ವೈದ್ಯಕೀಯ ಚಿಕಿತ್ಸೆ ಪಡೆಯಲು ನನ್ನ ಕಂದ ಯಾಕೆ ತೊಂದರೆ ಅನುಭವಿಸಬೇಕು. ಇದಕ್ಕೆ ಉತ್ತರವಿದೆಯೇ ಸರ್ ಸರ್ತ್ರಾಝ್ ಅಝೀಝ್(ಪಾಕ್ ಪ್ರಧಾನಿಯ ವಿದೇಶ ವ್ಯವಹಾರ ಸಲಹೆಗಾರ) ಅಥವಾ ಮೇಡಂ ಸುಷ್ಮಾ?... ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News