×
Ad

ಉಳ್ಳಾಲ ನಗರಸಭಾ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳ ಸಭೆ

Update: 2017-07-18 21:55 IST

ಉಳ್ಳಾಲ, ಜು.18: ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಮನೆ ಮನೆಗೆ ತೆರಳುವ ಪಿಎಲ್‌ಎಗಳು ತಮ್ಮ ಬೂತ್‌ನಲ್ಲಿ ಶಾಶ್ವತವಾಗಿ ವಲಸೆ ಹೋದವರ ಮತ್ತು ನಿಧನ ಹೊಂದಿದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವಾಗ ಹೊಸ ಅರ್ಜಿ ನಮೂನೆಯಲ್ಲಿ ಸರಿಯಾದ ಕಾರಣವನ್ನು ನೀಡಬೇಕು. ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಸಂದರ್ಭದಲ್ಲಿ ಅರ್ಜಿಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮತಗಟ್ಟೆ ಅಧಿಕಾರಿಗಳು ಗಮನ ಹರಿಸಬೇಕಾಗಿದ್ದು, ಅದರೊಂದಿಗೆ ಮತದಾರರ ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಖಡ್ಡಾಯವಾಗಿ ನಮೂದಿಸಬೇಕು ಎಂದು ಎಂದು ಸಹಾಯಕ ಆಯುಕ್ತ ರೇಣುಕಾಪ್ರಸಾದ್ ತಿಳಿಸಿದರು.

ಅವರು ಭಾರತ ಸರಕಾರದ ಚುನಾವಣಾ ಆಯೋಗದ ಆದೇಶದಂತೆ 18-21 ವರ್ಷ ಪ್ರಾಯ ತುಂಬಿರುವ ಸಾರ್ವಜನಿಕರ ಹೆಸರನ್ನು ಮತದಾರರಪಟ್ಟಿಯಲ್ಲಿ ನೋಂದಾಯಿಸಲು ಮತದಾರರ ಪಟ್ಟಿಗಳಿಂದ ಹೆಸರು ತೆಗೆದು ಹಾಕಲು ಹಾಗೂ ಮತದಾರರ ಪಟ್ಟಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕುರಿತು ಸಹಾಯಕ ಆಯುಕ್ತರ ಉಸ್ತುವಾರಿಯಲ್ಲಿ ಉಳ್ಳಾಲ ನಗರಸಭಾ ಸಭಾಂಗಣದಲ್ಲಿ ಉಳ್ಳಾಲ ವ್ಯಾಪ್ತಿಯ ಎಲ್ಲಾ ಬೂತು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

ಪ್ರಸ್ತುತ ಚಾಲ್ತಿಯಲ್ಲಿರುವ ಅವರ ಮೊಬೈಲ್ ನಂಬರ್‌ಗಳನ್ನು ಖಡ್ಡಾಯವಾಗಿ ನಮೂದಿಸುವುದರಿಂದ ಮುಂದಿನ ದಿನಗಳಲ್ಲಿ ಮತದಾನ ಸಂದರ್ಭದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗಿ ಆಧಾರ್ ಲಿಂಕ್ ಮಾಡುವ ಸಾಧ್ಯತೆ ಇರುವುದರಿಂದ ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ಸಂಖ್ಯೆಗೆ ಅರ್ಜಿಯಲ್ಲಿ ನಮೂದಿಸುವಾಗ ಮಹತ್ವ ನೀಡಬೇಕು. ಇನ್ನೊಂದು ಸಾಧ್ಯತೆಯಲ್ಲಿ ಮತದಾರರ ಪಟ್ಟಿ ಕೊನೆಯ ಹಂತದಲ್ಲಿ ಸಮಸ್ಯೆ ಇದ್ದರೆ ದೂರವಾಣಿ ಕರೆ ಮಾಡಿ ಅವರಿಂದ ಮಾಹಿತಿ ಪಡೆಯಲು ಸಹಕಾರಿಯಾಗುತ್ತದೆ. ಎಲ್ಲ ವಿವರವನ್ನು ಪಡೆದ ಬಳಿಕ ಅರ್ಜಿಯನ್ನು ನೀಡುವ ಪಡೆಯುವ ಮೊದಲು ಸಾವಕಾಶವಾಗಿ ಪರಿಶೀಲನೆ ನಡೆಸಿದರೆ ಯಾವುದೇ ಸಮಸ್ಯೆ ಬರಲು ಸಾದ್ಯವಿಲ್ಲ ಎಂದರು.

ನಗರ ಸಭಾ ಸದಸ್ಯ ಮಹಮ್ಮದ್ ಮುಕ್ಕಚ್ಚೇರಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ನಿಧನ ಹೊಂದಿದವರ ಹೆಸರು ಕಳೆದ ಹಲವು ವರ್ಷಗಳಿಂದ ಹಾಗೇ ಉಳಿದಿದೆ.ನಿಧನ ಹೊಂದಿದವರ ಹೆಸರು ಇರುವುದರಿಂದ ಮತದಾನ ನಡೆದಾಗ ಶೇಖಡವಾರು ಮತದಾನ ಲೆಕ್ಕಾಚ್ಚಾರ ಮಾಡುವಾಗ ಸಮಸ್ಯೆಯಾಗುತ್ತದೆ ಈ ನಿಟ್ಟಿನಲ್ಲಿ ಸರಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು. ಕೆಲವು ಕಡೆ ಎಂಟು ವರ್ಷದಿಂದ ವಾಸವಿಲ್ಲದಿದ್ದರೂ ಅವರು ಮತದಾರರ ಪಟ್ಟಿಯಲ್ಲಿ ಹೆಸರೂ ಹಾಗೇ ಉಳಿದಿದೆ ಎಂದಾಗ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಮಾತನಾಡಿ, ಮತದಾರರ ಪಟ್ಟಿಯಿಂದ ಹೆಸರು ತೆಗೆಯುವಾಗ ಸ್ಥಳೀಯರ ಮಾಹಿತಿ ಪಡೆದು ಅವರನ್ನು ಮಹಜರಾಗಿ ತೆಗೆದುಕೊಂಡರೆ ಸಮಸ್ಯೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದ ಏಜೆಂಟರು ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದರು.

ವಿಶೇಷ ಆಂದೋಲನ : ಆಯೋಗದ ನಿರ್ದೇಶನದನ್ವಯ ವಿಶೇಷ ಆಂದೋಲನವನ್ನು ಜು. 23ರಂದು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಾಕಿ ಉಳಿದಿರುವ ಮತದಾರರ ಹೆಸರು ನೋಂದಣಿ ಮತ್ತು ಮತದಾರರ ಪಟ್ಟಿಗಳಿಂದ ಹೆಸರು ತೆಗೆದು ಹಾಕಲು ಹಾಗೂ ಮತದಾರರ ಪಟ್ಟಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕುರಿತು ಆಯಾಯ ಮತಗಟ್ಟೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಹುಸೈನ್ ಕೂಂಞಿಮೋನು, ಪೌರಾಯುಕ್ತೆ ವಾಣಿ ವಿ. ಆಳ್ವ, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕ್ಷೇತ್ರ ಶಿಕ್ಷಣಾಧಿಕಾರಿ, ಅಂಗನವಾಡಿ ಮೇಲ್ವಿಚಾರಕಿ, ನಗರಸಭಾ ಸದಸ್ಯರು, ಗ್ರಾಮಕರಣಿಕರು, ಬೂತು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News