ಮಹಿಳೆಯ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಪ್ರಶಾಂತ್
ಮಂಗಳೂರು, ಜು.18: ಜಿಲ್ಲೆಯಲ್ಲಿ ಮತಾಂಧರ ಹಾವಳಿ ಹೆಚ್ಚುತ್ತಿರುವ ಮಧ್ಯೆಯೇ ಚಿನ್ನಾಭರಣ ಸಹಿತ ಅಮೂಲ್ಯ ದಾಖಲೆ ಪತ್ರಗಳಿದ್ದ ಮುಸ್ಲಿಂ ಮಹಿಳೆಯೊಬ್ಬರಿಗೆ ಸೇರಿದ ಬ್ಯಾಗನ್ನು ರಿಕ್ಷಾ ಚಾಲಕರೊಬ್ಬರು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಮಂಗಳವಾರ ನಡೆದಿದೆ.
ನಗರದ ಮುಳಿಹಿತ್ಲುವಿನ ಹಾಜಿರಾ ಎಂಬವರು ಸೋಮವಾರ ರಾತ್ರಿ ಸುಮಾರು 8:30ಕ್ಕೆ ಚಿನ್ನಾಭರಣ ಖರೀದಿಸಿ ರಿಕ್ಷಾವೊಂದರಲ್ಲಿ ಮನೆಯತ್ತ ಪ್ರಯಾಣಿಸಿದರು. ಆದರೆ ಮನೆಗೆ ತಲುಪಿದ ಬಳಿಕ ತಾನು ಖರೀದಿಸಿದ ಚಿನ್ನಾಭರಣ ಹಾಗು ಡೆಬಿಟ್, ಕ್ರೆಡಿಟ್ ಕಾರ್ಡ್ ಸಹಿತ ಅಮೂಲ್ಯ ದಾಖಲೆಪತ್ರಗಳಿರುವ ವ್ಯಾನಿಟಿ ಬ್ಯಾಗ್ ರಿಕ್ಷಾದಲ್ಲಿ ಬಿಟ್ಟಿರುವುದು ನೆನಪಿಗೆ ಬಂತು. ತಕ್ಷಣ ಆಸುಪಾಸು ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಪಾಂಡೇಶ್ವರ ಠಾಣೆಗೆ ದೂರು ನೀಡಲಾಯಿತು.
ಆದರೆ ರಾತ್ರಿ ಸುಮಾರು 11:30ಕ್ಕೆ ಹಾಜಿರಾ ಅವರಿಗೆ ಕರೆ ಮಾಡಿದ ರಿಕ್ಷಾ ಚಾಲಕ ಕುತ್ತಾರ್ ನಿವಾಸಿ ಪ್ರಶಾಂತ್, ‘ನಿಮ್ಮ ಬ್ಯಾಗ್ ಕಾಣೆಯಾಗಿದೆಯೇ?’ ಎಂದು ವಿಚಾರಿಸಿದರು. ತಕ್ಷಣ ಹಾಜಿರಾ ಹೌದೆಂದರಲ್ಲದೆ, ಅದರಲ್ಲಿ ಅಮೂಲ್ಯ ದಾಖಲೆಪತ್ರಗಳಿವೆ. ದಯವಿಟ್ಟು ನನಗೆ ಮರಳಿಸಿ ಎಂದು ಭಿನ್ನವಿಸಿಕೊಂಡರು. ‘ಆತಂಕ ಪಡಬೇಡಿ. ನಿಮ್ಮ ಚಿನ್ನಾಭರಣ ಸಹಿತ ಎಲ್ಲವೂ ಭದ್ರವಾಗಿದೆ. ನಾಳೆ ಖಂಡಿತಾ ನಿಮಗೆ ಮರಳಿಸುವೆ’ ಎಂದರು.
ಅದರಂತೆ ಮಂಗಳವಾರ ರಿಕ್ಷಾ ಚಾಲಕ ಪ್ರಶಾಂತ್ ನಗರಕ್ಕೆ ಆಗಮಿಸಿ ಹಾಜಿರಾರಿಗೆ ವ್ಯಾನಿಟಿ ಬ್ಯಾಗ್ ಮರಳಿಸಿದ್ದಾರೆ. ಆವಾಗ ಹಾಜಿರಾ ಕೃತಜ್ಞತಾಪೂರ್ವಕವಾಗಿ ಬಹುಮಾನ ಕೊಡಲು ಮುಂದಾದರೂ ಪ್ರಶಾಂತ್ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಹೆಸರು ಕೇಳಿದರೂ ಹೇಳಲಿಲ್ಲ. ಬ್ಯಾಗ್ ಹಸ್ತಾಂತರಿಸುವ ಫೋಟೋ ತೆಗೆಯಲೂ ಒಪ್ಪಿಗೆ ನೀಡಲಿಲ್ಲ. ಅಂತಿಮವಾಗಿ ಹಾಜಿರಾ ಕುಟುಂಬಸ್ಥರು ತಮ್ಮ ಹೆಸರು, ವಿಳಾಸವನ್ನು ಪರಿಪರಿಯಾಗಿ ವಿನಂತಿಸಿದ ಬಳಿಕ ತನ್ನ ಹೆಸರು ಹೇಳಿ ತನ್ನ ಪಾಡಿಗೆ ತಾನು ಹೊರಟು ಹೋಗಿದ್ದಾರೆ.