×
Ad

ಮಂಗಳೂರು ಜೈಲೊಳಗೆ ಬಾಡೂಟ: ಕೈದಿಗಳಿಂದಲೇ ಮೊಬೈಲ್‌ನಿಂದ ಫೋಟೊ ಅಪ್‌ಲೋಡ್!

Update: 2017-07-19 15:46 IST

ಮಂಗಳೂರು, ಜು. 19: ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಬಾಡೂಟದಲ್ಲಿ ತೊಡಗಿರುವ ಮೊಬೈಲ್ ಚಿತ್ರಣವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಜೈಲಿನ ಅವ್ಯವಸ್ಥೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಮಂಗಳೂರು ಜೈಲಿನಲ್ಲಿ ಆಗಾಗ್ಗೆ ಗಾಂಜಾ, ಮೊಬೈಲ್, ಸಿಮ್ ಕಾರ್ಡ್‌ಗಳು ಪತ್ತೆಯಾಗುತ್ತಿರುವ ಸುದ್ದಿಯ ಜತೆಗೆ ಅಲ್ಲಿ ಕೈದಿಗಳಿಗೆ ಬಾಡೂಟ, ಗುಂಡು, ತುಂಡಿನ ವ್ಯವಸ್ಥೆಯೂ ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಆದರೆ ಜೈಲಿನ ಅಧಿಕಾರಿಗಳು ಮಾತ್ರ ಇಂತಹ ಆರೋಪಗಳನ್ನು ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಇದೀಗ ಆ ಆರೋಪವನ್ನು ಸಾಬೀತುಗೊಳಿಸಿದಂತಿರುವ ಬಾಡೂಟದ ಫೋಟೊ ದೃಶ್ಯಗಳು ಕೈದಿಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಹೊಡೆದಾಟ, ಹಲ್ಲೆ ಪ್ರಕರಣಗಳ ಮೂಲಕವೂ ಮಂಗಳೂರು ಜೈಲು ಪದೇ ಪದೇ ಸುದ್ದಿ ಮಾಡುತ್ತಲೇ ಇರುತ್ತದೆ. ಇದೀಗ ಕೆಲ ದಿನಗಳ ಹಿಂದಷ್ಟೇ ಜೈಲಿನೊಳಗೆ ಕೈದಿಗಳಿಂದ ನಡೆದಿದೆ ಎನ್ನಲಾದ ಬಾಡೂಟದ ದೃಶ್ಯಗಳು ಜೈಲಿನ ಸುರಕ್ಷಾ ವ್ಯವಸ್ಥೆಗೂ ಸವಾಲೆಸೆದಿದೆ.

ಪ್ಲಾಸ್ಟಿಕ್ ಚೀಲದ ಮೂಲಕ ಮಾಂಸಾಹಾರ ಜೈಲಿನೊಳಗೆ ರವಾನೆಯಾಗಿರುವುದು ಈ ಫೋಟೊದ ಮೂಲಕ ಸ್ಪಷ್ಟವಾಗುತ್ತಿದ್ದು, ಆರು ಮಂದಿ ಆರೋಪಿಗಳು ಊಟದ ಜತೆಗೆ ಫೋಟೊಗೆ ಫೋಸ್ ಕೊಡುತ್ತಿರುವುನ್ನೂ ಕಾಣಬಹುದಾಗಿದೆ.
ಹಳೆ ಜೈಲಿನ ಕೊಠಡಿ ಒಳಗಡೆ ಬಾಗಿಲಿಗೆ ಕರ್ಟನ್ ಹಾಕಿ ಪಾರ್ಟಿ ಮಾಡುತ್ತಿರುವ ದೃಶ್ಯ ಇದಾಗಿದ್ದು, ಇದಕ್ಕೆ ಜೈಲು ಸಿಬ್ಬಂದಿಗಳೇ ಅವಕಾಶ ಕಲ್ಪಿಸಿದಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಊಟ ಮಾಡುತ್ತಿರುವ ದೃಶ್ಯವನ್ನು ಜೈಲ್ ಒಳಗಡೆ ಇರುವ ಕೈದಿಗಳೇ ತೆಗೆದಿದ್ದಾರೆನ್ನಲಾಗಿದೆ.

ಕಾರಾಗೃಹದಲ್ಲಿ ಈ ಹಿಂದೆಯೂ ಕುಖ್ಯಾತ ಕ್ರಿಮಿನಲ್ ಆರೋಪ ಹೊತ್ತ ರಶೀದ್ ಮಲಬಾರಿ ಇದ್ದ ಸಂದರ್ಭದಲ್ಲೂ ಅಲ್ಲಿ ಬಾಡೂಟ ಹಾಗೂ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಗಳು ವ್ಯಕ್ತವಾಗಿತ್ತು.

ಕಾರಾಗೃಹಗಳ ಭದ್ರತೆಯ ಹಿತದೃಷ್ಟಿಯಿಂದ ಕೆಲ ವರ್ಷಗಳ ಹಿಂದೆ ಐಪಿಎಸ್ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಧಾರದಂತೆ ಹೊರಗಿನಿಂದ ಬೇಯಿಸಿದ ಆಹಾರವನ್ನು ಜೈಲಿನೊಳಗೆ ಕೊಂಡೊಯ್ಯುವುದನ್ನು ನಿಷೇಘಿಸಲಾಗಿತ್ತು. ಕೈದಿಗಳನ್ನು ಭೇಟಿ ಮಾಡಲು ಬರುವವರು ಕೇವಲ ಹಣ್ಣು ಹಂಪಲುಗಳನ್ನು ಮಾತ್ರವೇ ತರಲು ಅವಕಾಶ. ಹಾಗಿದ್ದರೂ ಮಂಗಳೂರು ಜೈಲಿನಲ್ಲಿ ಪ್ಲಾಸ್ಟಿಕ್ ಚೀಲಗಳ ಮೂಲಕ ಬೇಯಿಸಿದ ಆಹಾರ ಪದಾರ್ಥಗಳು ಯಾವ ರೀತಿಯಲ್ಲಿ ರವಾನೆಯಾಗುತ್ತಿವೆ ಎಂಬುದನ್ನು ಮಾತ್ರ ಅಧಿಕಾರಿಗಳೇ ಉತ್ತರಿಸಬೇಕಿದೆ.

ಜಾಮರ್ ಇದ್ದರೂ ಕಾರ್ಯ ನಿರ್ವಹಿಸುತ್ತೆ ಮೊಬೈಲ್!

ಜೈಲಿನಲ್ಲಿ ಹಿರಿಯ ಅಧಿಕಾರಿಗಳ ತಪಾಸಣೆಯ ವೇಳೆ ಆಗಾಗ್ಗೆ ಮೊಬೈಲ್‌ಗಳು, ಸಿಮ್ ಕಾರ್ಡ್‌ಗಳು ಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳಿಂದೀಚೆಗೆ ಜಾಮರ್ ಅಳವಡಿಸಲಾಗಿದೆ. ಆದರೆ ಜಾಮರ್ ಅಳವಡಿಕೆ ಜೈಲಿನೊಳಗೆ ಕೈದಿಗಳ ಮೊಬೈಲ್ ಬಳಕೆಗೆ ಮಾತ್ರ ಯಾವುದೇ ತೊಂದರೆಯನ್ನು ನೀಡಿಲ್ಲ. ಬದಲಿಗೆ ಜೈಲಿನ ಸುತ್ತಮುತ್ತಲಿನ ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ಹಲವಾರು ಸಮಯದಿಂದ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ಸ್ಥಳೀಯರು ಹಾಗೂ ಸಾರ್ವಜನಿಕರು ಎದುರಿಸುತ್ತಿದ್ದಾರೆ. ಇದೆಂತಹ ವಿಪರ್ಯಾಸ ಎಂಬುದು ಮಾತ್ರ ಜಿಲ್ಲಾಡಳಿತದಿಂದಲೂ ಈವರೆಗೆ ಬೇಧಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News