ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್‌ಡಿಪಿಐ
ಸಾರ್ವಜನಿಕವಾಗಿ ಕ್ಷಮೆ ಯಾಚಿಸಲಿ
ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ
ಮಂಗಳೂರು, ಜು.19: ವಿವಿಧ ಘಟನೆಗಳಲ್ಲಿ ಮೃತರಾದ 23 ಹಿಂದೂಗಳ ಪಟ್ಟಿಯನ್ನು ಕೇಂದ್ರ ಗೃಹಖಾತೆಗೆ ಸಲ್ಲಿಸಿ ಇವರನ್ನೆಲ್ಲಾ ಮುಸ್ಲಿಮರು ಕೊಂದಿದ್ದಾರೆ ಮತ್ತು ಇವರಿಗೆ ಪಿಎಫ್‌ಐ ಹಾಗು ಎಸ್‌ಡಿಪಿಐ ಬೆನ್ನೆಲುಬಾಗಿ ನಿಂತಿದೆ ಎಂದು ಸುಳ್ಳು ಆರೋಪ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ತಿಳಿಸಿದೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯದ ಅಭಿವೃದ್ಧಿಯ ಬದಲು ಕೀಳುಮಟ್ಟದ ರಾಜಕೀಯದಲ್ಲಿ ತೊಡಗಿದ್ದಾರೆ. ಕೊಲೆಯತ್ನಕ್ಕೀಡಾಗಿ ಇದೀಗ ಬದುಕುಳಿದಿರುವ ಮೂಡುಬಿದಿರೆಯ ಅಶೋಕ್ ಪೂಜಾರಿಯನ್ನು ಕೊಲೆಯಾದವರ ಪಟ್ಟಿಯಲ್ಲಿ ಸೇರಿಸಿ ತಪ್ಪೆಸಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಅಶಾಂತಿಯ ವಾತಾವರಣ ಸೃಷ್ಟಿಯಾಗುವ ಅಪಾಯವಿದೆ. ಹಾಗಾಗಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ರಾಜ್ಯ ಸರಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಶೋಭಾ ಕರಂದ್ಲಾಜೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕಲ್ಲದೆ, ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶೋಭಾ ಸಲ್ಲಿಸಿದ್ದ 23 ಮಂದಿಯನ್ನೊಳಗೊಂಡ ಪಟ್ಟಿಯಲ್ಲಿ ಸುಮಾರು 18-19 ಮಂದಿ ಆತ್ಮಹತೈ, ವೈಯಕ್ತಿಕ ಕಲಹ, ಗ್ಯಾಂಗ್‌ವಾರ್ ಇತ್ಯಾದಿಯಾಗಿ ಸಾವಿಗೀಡಾಗಿದ್ದಾರೆ. ಆದರೆ, ಅದನ್ನೆಲ್ಲಾ ಪಿಎಫ್‌ಐ ಮತ್ತು ಎಸ್‌ಡಿಪಿಐ ವಿರುದ್ಧ ಹೊರಿಸಿರುವುದು ಅಕ್ಷಮ್ಯ. ಹಾಗಾಗಿ ಶೀಘ್ರ ಕಾನೂನು ಸಲಹೆ ಪಡೆದು ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಉಪಸ್ಥಿತರಿದ್ದರು.