×
Ad

ಸರಕಾರದ ತಡೆಯಾಜ್ಞೆಗೆ ಮೇಯರ್ ಮಧ್ಯಪ್ರವೇಶಕ್ಕೆ ಬಿಜೆಪಿ ಆಗ್ರಹ

Update: 2017-07-19 18:05 IST

ಮಂಗಳೂರು, ಜು.19: ನಗರದ ಅಂಬೇಡ್ಕರ್ ವೃತ್ತದಿಂದ ಲೈಟ್‌ಹೌಸ್ ಮೂಲಕ ಕೆಥೋಲಿಕ್ ಕ್ಲಬ್ ವರೆಗೆ ಹೋಗುವ ರಸ್ತೆಗೆ ಮುಲ್ಕಿ ಸುಂದರ ರಾಮ್ ಶೆಟ್ಟಿ ಅವರ ಹೆಸರಿಡುವ ಮಂಗಳೂರು ಮಹಾನಗರಪಾಲಿಕೆ ನಿರ್ಣಯಕ್ಕೆ ಸರಕಾರ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಮೇಯರ್ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಪಾಲಿಕೆ ಪ್ರತಿಪಕ್ಷದ ನಾಯಕ ಗಣೇಶ್ ಹೊಸಬೆಟ್ಟು ಆಗ್ರಹಿಸಿದರು.

ಸುಂದರ ರಾಮ್ ಶೆಟ್ಟಿ ಅವರ ಹೆಸರಿಡುವ ಕುರಿತು ಪಾಲಿಕೆಯ ಸರ್ವಾನುಮತದ ನಿರ್ಣಯಕ್ಕೆ ಶಾಸಕ ಜೆ. ಆರ್. ಲೋಬೊ ಅವರು ನಗರಾಭಿವೃದ್ಧಿ ಇಲಾಖೆಯಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಕೌನ್ಸಿಲ್‌ಗೆ ಶಾಸಕರು ಮಾಡಿದ ಅವಮಾನವಾಗಿದೆ ಎಂದು ಪಾಲಿಕೆಯ ತನ್ನ ಕೊಠಡಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು.

ಕರ್ನಾಟಕ ಕಾರ್ಪೊರೇಶನ್ ಅಧಿನಿಯಮ 1964ರ ಸೆಕ್ಷನ್ 293ರ ಅನ್ವಯ ಲೈಟ್‌ಹೌಸ್ ಹಿಲ್ ರಸ್ತೆಗೆ ನಾಮಕರಣ ಮಾಡಲಾಗಿದೆ. ಆದರೆ ಶಾಸಕ ಲೋಬೊ ಅವರು ರಸ್ತೆಗೆ ನಾಮಕರಣ ಮಾಡಿದರೆ ಅಶಾಂತಿ ಕಾರಣವಾಗುತ್ತದೆ. ನಾಮಕರಣ ಮಾಡುವ ಮುನ್ನ ಸಾರ್ವಜನಿಕರ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜಿನ ಗಮನಕ್ಕೆ ತಂದಿಲ್ಲ ಎಂಬ ಕಾರಣವನ್ನು ನೀಡಿ ಯಥಾಸ್ಥಿತಿ ಕಾಪಾಡುವಂತೆ ಸರಕಾರದಿಂದ ಆದೇಶ ಹೊರಡಿಸಿದ್ದಾರೆ. ಆದರೆ ಪಾಲಿಕೆ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ನಂತರ ಸಾರ್ವಜನಿಕರ ಆಕ್ಷೇಪಗಳಿದ್ದರೆ ಸಲ್ಲಿಸಲು 30 ದಿನಗಳ ಅವಕಾಶ ನೀಡಿ ಪತ್ರಿಕಾ ಪ್ರಕಟಣೆ ಕೂಡ ನೀಡಲಾಗಿತ್ತು. ಆಗ ಯಾರೂ ಈ ಬಗ್ಗೆ ಆಕ್ಷೇಪ ಸಲ್ಲಿಸಿಲ್ಲ. ಇದೀಗ ಶಾಸಕರು ಸತ್ಯಕ್ಕೆ ದೂರವಾದದ್ದನ್ನು ಹೇಳುತ್ತಿದ್ದಾರೆ. ಶಾಸಕರಲ್ಲಿ ಕೇಳಿ ಕೌನ್ಸಿಲ್‌ನಲ್ಲಿ ನಿರ್ಣಯ ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಹೊಸಬೆಟ್ಟು ಟೀಕಿಸಿದರು.

ಮಹಾನಗರಪಾಲಿಕೆ ಅಭಿವೃದ್ಧಿ ಕೆಲಸದ ಕಡತವನ್ನು ಸರಕಾರದ ಮಟ್ಟದಲ್ಲಿ ಮಂಜೂರು ಮಾಡಲು ಅಸಹಾಯಕತೆಯನ್ನು ತೋರುತ್ತಿರುವ ಶಾಸಕರು ಈ ತಡೆಯಾಜ್ಞೆಯನ್ನು ಒಂದೇ ದಿನದಲ್ಲಿ ಜಾರಿ ಮಾಡುವ ಮೂಲಕ ತನ್ನ ಪೌರುಷ ಪ್ರದರ್ಶಿಸಿದ್ದಾರೆ. ಇದು ಮಹಾನಗರಪಾಲಿಕೆಯ ಪರಿಷತ್ ಹಾಗೂ ಮಂಗಳೂರಿನ ಮಹಾಜನತೆಗೆ ಮಾಡಿದ ಅವಮಾನವಾಗಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಅವರು ತಕ್ಷಣ ಮಧ್ಯಪ್ರವೇಶಿಸಿ ಪರಿಷತ್‌ನ ಘನತೆಯನ್ನು ಎತ್ತಿ ತೋರಿಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ನಗರೋತ್ಥಾನ ಅನುದಾನ ಕಳೆದ 5 ವರ್ಷದ ಅವಧಿಯಲ್ಲಿ ಮಂಗಳೂರು ಮಹಾನಗರಪಾಲಿಕೆಗೆ ಕೇವಲ 100 ಕೋಟಿ ರೂ. ಮಾತ್ರ ಬಂದಿದೆ. ಬೇರೆ ಮಹಾನಗರಪಾಲಿಕೆಗೆ ಎರಡನೇ ಹಂತದ 100 ಕೋಟಿ ರೂ. ಹಣ ಬಂದಿದೆ. ಈ ಕೆಲಸ ಮಾಡಲು ಶಾಸಕ ಲೋಬೊ ಅವರಿಗೆ ಸಮಯವಿಲ್ಲ. ನಗರ ಕೇಂದ್ರ ಮಾರುಕಟ್ಟೆ ಶಿಥಿಲಾವಸ್ಥೆಗೆ ತಲುಪಿದ್ದು, ಅದರ ನವೀಕರಣದ ಅಗತ್ಯವಿದೆ. ಆದರೆ ಮಾರುಕಟ್ಟೆ ನವೀಕರಣಕ್ಕೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದ್ದು, ತಮ್ಮ ಅಕಾರಾವಯಲ್ಲಿ ಪಂಪ್‌ವೆಲ್ ಬಸ್‌ಸ್ಟಾಂಡ್ 11 ಎಕರೆ ಭೂಮಿಯನ್ನು ಸ್ವಾಧೀ ನಪಡಿಸಿಕೊಂಡರೂ ಬಸ್ ನಿಲ್ದಾಣ ನಿರ್ಮಿಸಲು ಅನುದಾನ ತರುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಹೊಸಬೆಟ್ಟು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೇಮಾನಂದ ಶೆಟ್ಟಿ, ಸುಧೀರ್ ಕಣ್ಣೂರು ಹಾಗೂ ರಾಜೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News