ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿದ ಜಮೀನು ಕೈ ಬಿಡಲು ನಿರ್ಧಾರ
ಮನಪಾ ನಗರ ಯೋಜನೆ ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ
ಮಂಗಳೂರು, ಜು.19: ನಗರದ ಹೃದಯ ಭಾಗವೆಂದೇ ಗುರುತಿಸಲ್ಪಟ್ಟಿರುವ ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಕಾಯ್ದಿರಿಸಿದ 11.59 ಎಕರೆ ಜಮೀನನ್ನು ಸ್ವಾಧೀನಪಡಿಸದೆ ಕೈ ಬಿಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಇದರಿಂದ ಸುಮಾರು 60 ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮನಪಾ ನಗರ ಯೋಜನೆ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುರ್ರವೂಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಮುಹಮ್ಮದ್ ಕುಂಜತ್ತಬೈಲ್, ಹರೀಶ್ ಶೆಟ್ಟಿ, ಅಶೋಕ್ ಶೆಟ್ಟಿ, ಕವಿತಾ ವಾಸು ಉಪಸ್ಥಿತರಿದ್ದರು.
ನಗರದ ಪಂಪ್‌ವೆಲ್‌ನಲ್ಲಿ ನೂತನ ಬಸ್ ನಿಲ್ದಾಣಕ್ಕೆ 1ನೇ ಹಂತದಲ್ಲಿ 7.50 ಮತ್ತು 4 ಎಕರೆ ಸಹಿತ ಒಟ್ಟು 11.50 ಎಕರೆ ಭೂಮಿಯನ್ನು ಮೊದಲಿಗೆ ಭೂಸ್ವಾಧೀನ ಮಾಡಲಾಗಿತ್ತು. ಜಿಲ್ಲಾಡಳಿತ ಕೂಡ ಇದನ್ನು ಬಸ್‌ನಿಲ್ದಾಣಕ್ಕೆ ಮೀಸಲಿಟ್ಟು ನಕ್ಷೆ ರೂಪಿಸಿತ್ತು. ಈ ಮಧ್ಯೆ ಪಕ್ಕದ ಸುಮಾರು 11.59 ಎಕರೆ ಜಮೀನನ್ನು ಭೂಸ್ವಾಧೀನ ಮಾಡಲು 2008ರಲ್ಲಿ ಪಾಲಿಕೆ ನಿರ್ಧರಿಸಿತ್ತು. ಆದರೆ, ಈ ಜಮೀನನ್ನು ಪಾಲಿಕೆ ಸ್ವಾಧೀನಪಡಿಸಿಕೊಂಡಿರಲಿಲ್ಲ. ಇದರಿಂದ ಇಲ್ಲಿನ ಸುಮಾರು 60 ಕುಟುಂಬಗಳು ಅತ್ತ ಪರಿಹಾರವೂ ಇಲ್ಲ. ಇತ್ತ ಮಾರಾಟ ಮಾಡಲೂ ಅಸಾಧ್ಯವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ಸಹಿತ ಆಸುಪಾಸಿನ ಇತರ ಕಾರ್ಪೊರೇಟರ್‌ಗಳು ಕೂಡ ಮನಪಾ ನಗರ ಯೋಜನೆ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರ ಗಮನ ಸೆಳೆದಿದ್ದರು. ಈ ಬಗ್ಗೆ 2-3 ಬಾರಿ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆಗೆ ಬಂದರೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಅಬ್ದುರ್ರವೂಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಕಳೆದ ಹಲವು ವರ್ಷಗಳಿಂದ ಸಮಸ್ಯೆಗೆ ಸಿಲುಕಿದ್ದ 60ಕ್ಕೂ ಅಧಿಕ ಕುಟುಂಬಗಳ ಮುಖದಲ್ಲಿ ಸಂತಸದ ನಗೆ ಚಿಮ್ಮಿದೆ.
ನೊಂದಿದ್ದ ಕುಟುಂಬಗಳು: ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದ್ದರೂ ಬಳಿಕ ಹೆಚ್ಚುವರಿಯಾಗಿ ಪಡೆಯಲಾಗಿದ್ದ ಭೂಮಿಗೆ ಪರಿಹಾರ ನೀಡುವ ತೀರ್ಮಾನ ಆಗಿರಲಿಲ್ಲ. ಕಳೆದ ಹಲವು ವರ್ಷಗಳಿಂದ ಈ ಭೂಮಿ ಕಡತದಲ್ಲಿ ‘ಪಾಲಿಕೆಯದ್ದು’ ಎಂದೇ ಉಳಿದುಕೊಂಡಿತ್ತು. ಹಾಗಾಗಿ ಇಲ್ಲಿ ವಾಸಿಸುತ್ತಿದ್ದ ಬಡ ಕುಟುಂಬಗಳು ಮುಂದೇನು ಎಂದು ತಿಳಿಯದೆ ಗೊಂದಲ, ಆತಂಕಕ್ಕೆ ಸಿಲುಕಿತ್ತು. ಅಂದರೆ, ಜಾಗ ಮಾರಲೂ ಸಾಧ್ಯವಿರಲಿಲ್ಲ. ಹೊಸ ಮನೆ ಕಟ್ಟಿಕೊಳ್ಳಲು ಅಥವಾ ನವೀಕರಿಸಲೂ ಸಾಧ್ಯವಿರಲಿಲ್ಲ. ಹಾಗಾಗಿ ‘ತಮ್ಮ ಜಾಗವನ್ನು ಪಡೆದು ಪರಿಹಾರದ ಮೊತ್ತವನ್ನು ಕೊಡಿ ಅಥವಾ ಭೂಮಿಯನ್ನು ಮರಳಿಸಿ’ ಎಂದು ಈ ಕುಟುಂಬಗಳು ಹಲವು ಬಾರಿ ಮಂಗಳೂರು ಪಾಲಿಕೆಗೆ ಮನವಿ ಸಲ್ಲಿಸಿತ್ತು.
2014ರಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಆಗಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ಕೈಬಿಡಲು ಮನಪಾಕ್ಕೆ ಸೂಚನೆಯನ್ನೂ ನೀಡಿತ್ತು. ಮೂರು ವರ್ಷವಾದರೂ ಅದು ಕಾರ್ಯಗತಗೊಂಡಿರಲಿಲ್ಲ.
ಅಂದು 19 ಕೋಟಿ; ಈಗ 30 ಕೋಟಿ ರೂ. ಪರಿಹಾರ..!
2ನೇ ಹಂತದ ಭೂಸ್ವಾಧೀನ ಮಾಡಿರುವ ಭೂಮಿಗೆ 2009ರಲ್ಲಿ 19 ಕೋಟಿ ರೂ. ಇದ್ದ ಪರಿಹಾರ ಮೊತ್ತ ಈಗ 30 ಕೋಟಿ ರೂ.ಗೆ ಏರಿಕೆಯಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಪರಿಹಾರ ನೀಡಲು ಪಾಲಿಕೆಗೆ ಕಷ್ಟ ಸಾಧ್ಯ. ಜತೆಗೆ ಬಸ್‌ನಿಲ್ದಾಣಕ್ಕೆಂದು 11.50 ಎಕರೆ ಜಾಗ ಮೀಸಲಿಟ್ಟಿರುವುದರಿಂದ ಹೆಚ್ಚುವರಿ ಜಮೀನಿನ ಆವಶ್ಯಕತೆ ಇಲ್ಲ. ಹಾಗಾಗಿ ಈ ಜಮೀನನ್ನು ಸ್ವಾಧೀನಪಡಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯಲಾಗಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ನಗರ ಯೋಜನಾ ಸ್ಥಾಯಿ ಸಮಿತಿಯು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಮುಂದಿನ ಪಾಲಿಕೆ ಸಭೆಯಲ್ಲಿ ಇದು ಸ್ಥಿರೀಕರಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಪಂಪ್‌ವೆಲ್ ಬಸ್‌ನಿಲ್ದಾಣ; ಪ್ರಕ್ರಿಯೆ ಪ್ರಗತಿಯಲ್ಲಿ
ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್‌ನಿಲ್ದಾಣದ ಪ್ರಕ್ರಿಯೆಗೆ ಇದೀಗ ವೇಗ ಸಿಗುವ ಸಾಧ್ಯತೆ ಇದೆ. ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಸಂಬಂಧ ಆಸಕ್ತ ಅಭಿವೃದ್ದಿ ಸಂಸ್ಥೆಯವರಿಂದ ಮಾದರಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಈಗಾಗಲೆ 6 ಮಂದಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪಾಲಿಕೆಗೆ ಬಂದ ಮಾದರಿ ಪ್ರಸ್ತಾವನೆಗಳನ್ನು ಪರಿಶೀಲಿಸಿ ಜು.27ರಂದು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಅವಕಾಶವಿದೆ.