ನಾಗಾಲ್ಯಾಂಡ್: ಮತ್ತೆ ಝೆಲಿಯಾಂಗ್‌ಗೆ ಒಲಿದ ಸಿಎಂ ಪಟ್ಟ

Update: 2017-07-19 14:46 GMT

ಕೊಹಿಮ, ಜು.19: ನಾಗ ಪೀಪಲ್ಸ್ ಫ್ರಂಟ್(ಎನ್‌ಪಿಎಫ್) ಮುಖಂಡ ಮತ್ತು ಆಡಳಿತಾರೂಢ ಡಿಎಎನ್ ಅಧ್ಯಕ್ಷ ಟಿ.ಆರ್.ಝೆಲಿಯಾಂಗ್ ಅವರು ಮತ್ತೆ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

  ಮುಖ್ಯಮಂತ್ರಿಯಾಗಿದ್ದ ಶುರ್‌ಹೊಝೆಲಿ ಲಿಝೆಟ್ಸು ಮತ್ತವರ ಬೆಂಬಲಿಗರು ಸದನದಲ್ಲಿ ಬಹುಮತ ಸಾಬೀತುಗೊಳಿಸಬೇಕೆಂದು ಗುವಾಹಟಿ ಹೈಕೋರ್ಟ್ ಸೂಚಿಸಿತ್ತು. ಆದರೆ ಇದಕ್ಕೆ ತಡೆಯಾಜ್ಞೆ ತರಬೇಕೆಂದು ಲಿಝೆಟ್ಸು ನಡೆಸಿದ್ದು ಪ್ರಯತ್ನ ವಿಫಲವಾದ ಬಳಿಕ ಅವರು ವಿಶ್ವಾಸಮತ ಪಡೆಯುವ ಪ್ರಕ್ರಿಯೆಗೆ ಮುಂದಾಗಲಿಲ್ಲ.

ಜುಲೈ 9ರಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದ ಝೆಲಿಯಾಂಗ್, ತನಗೆ 42 ಎನ್‌ಪಿಎಫ್ ಶಾಸಕರ ಬೆಂಬಲ ಇರುವುದಾಗಿ ತಿಳಿಸಿದ್ದರು. ವಿಧಾನಸಭೆಯ ಒಟ್ಟುಬಲ 59 ಆಗಿದೆ.

   ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ಝೆಲಿಯಾಂಗ್‌ಗೆ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಝೆಲಿಯಾಂಗ್, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭ ಮಹಿಳೆಯರಿಗೆ ಶೇ.33 ಸೀಟು ಮೀಸಲಾತಿ ಕೊಡುಗೆ ನೀಡಿದ್ದರು. ಆದರೆ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು ಮತ್ತು ಐದು ತಿಂಗಳ ಹಿಂದೆ ನಡೆದಿದ್ದ ರಾಜ್ಯವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಝೆಲಿಯಾಂಗ್ ಪದತ್ಯಾಗ ಮಾಡಿದ್ದರು.

  ಜುಲೈ 22ಕ್ಕೂ ಮೊದಲು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿಗೆ ಸೂಚಿಸಿದ್ದಾರೆ. ಜುಲೈ 21ರಂದು ವಿಶ್ವಾಸಮತ ಸಾಬೀತುಪಡಿಸಿದ ಬಳಿಕ ಸಚಿವ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಝೆಲಿಯಾಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News