ಇಂಡಿಗೊ, ಏರ್‌ಇಂಡಿಯಾ ಉಪಕ್ರಮ: ಟಿಡಿಪಿ ಸಂಸದನ ಮೇಲಿದ್ದ ನಿಷೇಧ ತೆರವು
ಹೈದರಾಬಾದ್, ಜು.19: ಕಳೆದ ತಿಂಗಳು ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ವಿಮಾನದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದ ಟಿಡಿಪಿ ಸಂಸದ ಕೆ.ದಿವಾಕರ್ ರೆಡ್ಡಿ ಅವರಿಗೆ ವಿಧಿಸಲಾಗಿದ್ದ ಪ್ರಯಾಣ ನಿಷೇಧವನ್ನು ಇಂಡಿಗೊ ಮತ್ತು ಏರ್‌ಇಂಡಿಯಾ ತೆರವುಗೊಳಿಸಿದೆ.
ಜೂನ್ 16ರಂದು ರಾತ್ರಿ ವಿಶಾಖಪಟ್ಟಣಂನಿಂದ ಹೈದರಾಬಾದ್‌ಗೆ ತೆರಳುವ ವಿಮಾನದಲ್ಲಿ ರೆಡ್ಡಿ ಪ್ರಯಾಣಿಸುವವರಿದ್ದರು. ಆದರೆ ಅವರು ನಿಲ್ದಾಣಕ್ಕೆ ಆಗಮಿಸಿದಾಗ ವಿಳಂಬವಾಗಿತ್ತು ಮತ್ತು ಗೇಟ್‌ಗಳನ್ನು ಮುಚ್ಚಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ರೆಡ್ಡಿ ಏರ್‌ಲೈನ್ ಸಿಬ್ಬಂದಿಗಳನ್ನು ಏರುಧ್ವನಿಯಲ್ಲಿ ಗದರಿದ್ದರು. ಅಲ್ಲದೆ ಕಚೇರಿಯಲ್ಲಿದ್ದ ಒಂದು ಪ್ರಿಂಟರ್ ಮೇಲೆ ಕೈಯಿಂದ ಅಪ್ಪಳಿಸುವ ಹಾಗೂ ಸಿಬ್ಬಂದಿಯನ್ನು ಆಚೆಗೆ ತಳ್ಳುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ರೆಡ್ಡಿ ದೇಶದೊಳಗೆ ನಡೆಸುವ ವಿಮಾನ ಪ್ರಯಾಣದ ಮೇಲೆ ಎಂಟು ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದ್ದವು. ಇದೀಗ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ವೈ.ಎಸ್.ಚೌಧರಿ ಸಂಘಟಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ವಿಮಾನಯಾನ ಅಧಿಕಾರಿಗಳು ಮತ್ತು ಸಂಸದ ರೆಡ್ಡಿ , ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಒಪ್ಪಿಕೊಂಡಿದ್ದಾರೆ.ಅದರಂತೆ ಎರಡು ವಿಮಾನಯಾನ ಸಂಸ್ಥೆಗಳು ಇವರ ಮೇಲಿದ್ದ ನಿಷೇಧವನ್ನು ಹಿಂಪಡೆದಿವೆ ಹಾಗೂ ವಿಮಾನಯಾನ ಸಂಸ್ಥೆಗಳ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ರೆಡ್ಡಿ ಹಿಂಪಡೆದಿದ್ದಾರೆ.