ಜಿಎಸ್‌ಟಿಯಿಂದ ಸರಕು ಬೆಲೆ ಇಳಿಕೆ: ಜೇಟ್ಲಿ
ಹೊಸದಿಲ್ಲಿ, ಜು.19: ಜುಲೈ 1ರಿಂದ ಜಿಎಸ್‌ಟಿ ಜಾರಿಗೊಂಡ ಬಳಿಕ ಸರಕುಗಳ ಬೆಲೆ ಶೇ.4ರಿಂದ ಶೇ.8ರಷ್ಟು ಕಡಿಮೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಬುಧವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಜೇಟ್ಲಿ, ತೆರಿಗೆ ಜಾಲ ವಿಸ್ತೃತಗೊಂಡಿದೆ. ದೇಶದ ಮಾರುಕಟ್ಟೆ ಸಂಘಟಿತವಾಗಿದೆ. ಇನ್‌ಸ್ಪೆಕ್ಟರ್ ರಾಜ್ (ತನಿಖೆಯ ಯುಗ) ಮುಗಿದಿದೆ. ಜನಸಾಮಾನ್ಯರ ಮೇಲಿನ ತೆರಿಗೆಯ ಹೊರೆ ಕಡಿಮೆಯಾಗಿದೆ. ಈಗ ಎಲ್ಲರೂ ಗೆಲುವು ಸಾಧಿಸಿದ ಪರಿಸ್ಥಿತಿ ಇದೆ. ಜಿಎಸ್‌ಟಿಯಿಂದ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಿದೆ. ತೆರಿಗೆಯ ಶೇ.80ರಷ್ಟು ಪಾಲು ರಾಜ್ಯಗಳಿಗೆ ಸಲ್ಲುತ್ತದೆ ಎಂದರು.
ತೆರಿಗೆಯ ಮೇಲೆ ತೆರಿಗೆ ವಿಧಿಸುವ ಪದ್ದತಿ ಇನ್ನಿಲ್ಲ. ಇನ್ನು ದೇಶಾದ್ಯಂತ ಸರಕುಗಳ ಸಾಗಾಟ ಯಾವುದೇ ತಡೆಯಿಲ್ಲದೆ ನಡೆಯುತ್ತದೆ . ಈ ಹಿಂದೆ ಸುಮಾರು 80 ಲಕ್ಷ ಸಂಸ್ಥೆಗಳು ತೆರಿಗೆ ಪಾವತಿಸುತ್ತಿದ್ದರೆ ಇನ್ನು 100 ಲಕ್ಷಕ್ಕೂ ಹೆಚ್ಚು ಕಂಪನಿಗಳು ಹೊಸ ತೆರಿಗೆ ಪದ್ದತಿಗೆ ಒಳಪಡಲಿವೆ ಎಂದವರು ಹೇಳಿದರು. ಬಳಿಕ ವಿದೇಶ ವ್ಯವಹಾರ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್, ಪ್ರಧಾನಿ ಮೋದಿಯವರ ಇತ್ತೀಚಿನ ಅಮೆರಿಕ ಮತ್ತು ಇಸ್ರೇಲ್ ಪ್ರವಾಸದ ಕುರಿತು ಸಭೆಗೆ ಮಾಹಿತಿ ನೀಡಿದರು.
ಅಲ್ಲದೆ ಸದನಕ್ಕೆ ನಿಯಮಿತವಾಗಿ ಹಾಜರಾಗುವಂತೆ ಬಿಜೆಪಿ ಸಂಸದರಿಗೆ ಸೂಚಿಸಲಾಯಿತು . ಕಳೆದ ಎಪ್ರಿಲ್‌ನಲ್ಲಿ ಮುಗಿದ ಅಧಿವೇಶನದವರೆಗಿನ ಲೆಕ್ಕಾಚಾರದಂತೆ ಬಿಜೆಪಿಯ ಸಂಸದರು ಶೇ.80ರಿಂದ ಶೇ.90ರಷ್ಟು ಹಾಜರಾತಿ ಹೊಂದಿದ್ದಾರೆ. ಶೇ.80ರಷ್ಟು ಹಾಜರಾತಿ ದಾಖಲಿಸಿದ ಪಟ್ಟಿಯಲ್ಲಿ ಬಿಜೆಪಿಯ ಶೇ.79ರಷ್ಟು ಸಂಸದರು, ಕಾಂಗ್ರೆಸ್‌ನ ಶೇ.56ರಷ್ಟು ಸಂಸದರು ಸೇರಿದ್ದಾರೆ.