×
Ad

ಶತಮಾನ ಕಂಡ ಗಾಂಧಿ ಶಾಲೆಯ ಗೋಡೆ ಕುಸಿತ

Update: 2017-07-19 21:30 IST

ಉಡುಪಿ, ಜು.19: ನಗರದ ಕೆಎಂ ಮಾರ್ಗದಲ್ಲಿ 132 ವರ್ಷಗಳ ಇತಿಹಾಸ ಹೊಂದಿರುವ ಮಹಾತ್ಮ ಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಶಾಲೆ)ಯ ಗೋಡೆಯ ಒಂದು ಪಾರ್ಶ್ವ ಭಾರೀ ಮಳೆಗೆ ಕಳೆದ ರವಿವಾರ ಕುಸಿದು ಬಿದ್ದಿದೆ. ಆದರೆ ಇದರಿಂದ ತರಗತಿ ನಡೆಸಲು ಯಾವುದೇ ತೊಂದರೆ ಎದುರಾಗಿಲ್ಲ. ಪಾಠ-ಪ್ರವಚನಗಳೆಲ್ಲವೂ ಎಂದಿನಂತೆ ನಡೆಯುತ್ತಿವೆ.

ಶಾಲೆಗೆ ತಾಗಿ ಕೊಂಡಿರುವ, ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇದ್ದ ಕೋಣೆಯ ಮಣ್ಣಿನ ಗೋಡೆಯ ಒಂದು ಪಾರ್ಶ್ವ ಜರಿದಿರುವುದು ಸೋಮವಾರ ಬೆಳಗ್ಗೆ ಶಾಲೆ ತೆರೆದಾಗ ಗಮನಕ್ಕೆ ಬಂತು. ಆದರೆ ಇಂದು ಪತ್ರಕರ್ತರ ಗಮನಕ್ಕೆ ಇದು ಬಂದು, ಅವರು ಸ್ಥಳಕ್ಕೆ ಭೇಟಿ ನೀಡಿದಾಗ ತಕ್ಷಣ ಎಚ್ಚೆತ್ತುಕೊಂಡ ಇಲಾಖೆ ಮಧ್ಯಾಹ್ನದ ಬಳಿಕ ಗೋಡೆಯ ದುರಸ್ಥಿ ಪ್ರಕ್ರಿಯೆಗೆ ಚಾಲನೆ ನೀಡಿರುವುದಾಗಿ ತಿಳಿದುಬಂದಿದೆ.

ಉಡುಪಿಯ ಕೊಡುಗೈ ದಾನಿ ಎನಿಸಿದ್ದ ಹಾಜಿ ಅಬ್ದುಲ್ಲಾ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನ ಸ್ವಂತದ್ದಾದ 20 ಸೆನ್ಸ್ ಜಾಗವನ್ನು ಶಾಲೆ ನಿರ್ಮಾಣಕ್ಕೆಂದು ದಾನಪತ್ರದ ಮೂಲಕ ಬಿಟ್ಟುಕೊಟ್ಟಿದ್ದರು. ಅಲ್ಲಿ ದಾನಿಗಳ ನೆರವಿನಿಂದ 1885 ರಲ್ಲಿ ಈ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಗಿತ್ತು.

ಶಾಲೆಯ ಹಿಂದೆ ಅದಕ್ಕೆ ತಾಗಿಕೊಂಡಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಾಲ್ಕು ಎಕರೆ ಜಾಗವನ್ನು ಅನಿವಾಸಿ ಭಾರತೀಯರೊಬ್ಬರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ಅನುವಾಗುವಂತೆ ಸರಕಾರ ಬಿಟ್ಟುಕೊಟ್ಟಿದ್ದು, ಅಲ್ಲೀಗ ನೂತನ ಕಟ್ಟಡದ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಇದರಿಂದ ಸಂಪೂರ್ಣ ಮಣ್ಣಿನಿಂದ ಕಟ್ಟಿರುವ ಯಾವುದೇ ದುರಸ್ತಿ ಕಾಣದಿರುವ ಈ ಶಾಲೆಯ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ದುರ್ಬಲಗೊಂಡು ಅಪಾಯದ ಸ್ಥಿತಿಯಲ್ಲಿದೆ.

ಪ್ರಸಕ್ತ ಶಾಲೆಯಿರುವ ಸ್ಥಿತಿಯ ಕುರಿತು ಪತ್ರಿಕೆಗಳಲ್ಲಿ ವರದಿಗಳು ಬಂದ ಬಳಿಕ ಜಾಗೃತಗೊಂಡ ಶಿಕ್ಷಣ ಇಲಾಖೆ, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಇಲ್ಲೇ ಸಮೀಪದಲ್ಲಿ ಕಾರ್ಪೋರೇಷನ್ ಬಳಿ ಇರುವ ನಾರ್ತ್ ಶಾಲೆಗೆ ಸ್ಥಳಾಂತರಿಸಲು ಪ್ರಸ್ತಾವನೆಯೊಂದನ್ನು ಮೇಲಾಧಿಕಾರಿಗಳಿಗೆ ಕಳುಹಿಸಿದ್ದರೂ, ಶಾಲೆ ಮುಚ್ಚುವ ಬಗ್ಗೆ ಬಂದ ವಿರೋಧ ದಿಂದ ಸದ್ಯಕ್ಕೆ ಅದ್ನು ಕೈಬಿಟ್ಟಿರುವುದಾಗಿ ತಿಳಿದುಬಂದಿದೆ.

ಕಳೆದ ವಾರದಿಂದ ಸುರಿಯುತ್ತಿರುವ ಬಿರುಸಿನ ಮಳೆಯಿಂದ, ಈ ಶಾಲೆಯ ಭಾಗವಾಗಿದ್ದು, ಹಿಂದೆ ಇಲ್ಲಿ ಕಾರ್ಯಾ ಚರಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಒಂದುಪಾರ್ಶ್ಚ ಇದೀಗ ಕುಸಿದಿದೆ. ಇದರಿಂದ ಶಾಲೆಯ ಮಣ್ಣಿನ ಗೋಡೆಯ ಕುರಿತಂತೆ ಆತಂಕ ಎದುರಾಗಿದೆ.

ಸದ್ಯಕ್ಕೆ ಈ ಕಟ್ಟಡದಲ್ಲಿ ಮೂರು ಕೊಠಡಿಗಳಿವೆ. ಎರಡು ಹಾಲ್‌ಗಳಲ್ಲಿ ಕ್ರಮವಾಗಿ 1-3 ಮತ್ತು 4-7ನೆ ತರಗತಿ ನಡೆಯುತ್ತವೆ. ಒಂದು ಕೊಠಡಿಯನ್ನು ಶಾಲಾ ಕಚೇರಿಯನ್ನಾಗಿ ಬಳಸಲಾಗುತ್ತಿದೆ. ಶಾಲೆಯಲ್ಲೀಗ 55 ಮಂದಿ ವಿದ್ಯಾರ್ಥಿಗಳು ಕಲಿಯುತಿದ್ದು, ನಾಲ್ವರು ಶಿಕ್ಷಕಿಯರಿದ್ದಾರೆ. 10 ಮಂದಿ ಮಕ್ಕಳನ್ನು ವಳಕಾಡಿನ ಸೌತ್ ಶಾಲೆಗೆ ಟಿಸಿ ಕೊಟ್ಟು ಕಳುಹಿಸಲಾಗಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ದೊಂದಿಗೆ ಸರಕಾರದ ಎಲ್ಲಾ ಸೌಲಭ್ಯಗಳು ದೊರೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News