ಲೈಂಗಿಕ ದೌರ್ಜನ್ಯ ಪ್ರಕರಣ: ಸೆಕ್ಯೂರಿಟಿ ಗಾರ್ಡ್ ಬಂಧನ
Update: 2017-07-19 21:38 IST
ಮಂಗಳೂರು,ಜು.19: ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸೆಕ್ಯೂರಿಟಿ ಗಾರ್ಡ್‌ನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಗೋಳ್ತಮಜಲು ನಿವಾಸಿ ಸೀತಾರಾಮ ಶೆಟ್ಟಿ ಬಂಧಿತ ಆರೋಪಿ.
ಚಿಕಿತ್ಸೆಗೆ ದಾಖಲಾದ ತನ್ನ ತಾಯಿಯ ಯೋಗಕ್ಷೇಮ ನೋಡಿಕೊಳ್ಳಲು ಅಪ್ರಾಪ್ತ ಬಾಲಕ ಆಸ್ಪತ್ರೆಗೆ ಬಂದಿದ್ದು, ಮಹಿಳಾ ವಾರ್ಡ್‌ನಲ್ಲಿ ರಾತ್ರಿ ವಾಸ್ತವ್ಯಕ್ಕೆ ಅವಕಾಶ ಇಲ್ಲದ ಕಾರಣ, ಬಾಲಕ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಮಲಗಿದ್ದ. ಇದನ್ನು ಗಮನಿಸಿದ ಸೀತಾರಾಮ ಶೆಟ್ಟಿ, ತನ್ನ ರೂಮಿನಲ್ಲಿ ಹಾಸಿಗೆ ಹಾಕಿ ಮಲಗಲು ಅವಕಾಶ ಕಲ್ಪಿಸಿದ್ದ. ಬಳಿಕ ರಾತ್ರಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಲಾಗಿದೆ.
ಮರುದಿನ ಅನಾರೋಗ್ಯಕ್ಕೆ ಒಳಗಾದ ವೇಳೆ ಬಾಲಕ ಭದ್ರತಾ ಸಿಬ್ಬಂದಿಯ ಲೈಂಗಿಕ ದೌರ್ಜನ್ಯವನ್ನು ಮನೆ ಮಂದಿಗೆ ತಿಳಿಸಿದ್ದ. ಅದರಂತೆ ಮನೆಯವರು ಕದ್ರಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.