ಹೊಸ ದಿಗ್ಬಂಧನಗಳು ಪರಮಾಣು ಒಪ್ಪಂದದ ಉಲ್ಲಂಘನೆ: ಇರಾನ್
ಟೆಹರಾನ್ (ಇರಾನ್), ಜು. 19: ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ನೂತನ ದಿಗ್ಬಂಧನಗಳು ಈಗಾಗಲೇ ದುರ್ಬಲಗೊಂಡಿರುವ ಟೆಹರಾನ್-ವಾಶಿಂಗ್ಟನ್ ಸಂಬಂಧವನ್ನು ಇನ್ನಷ್ಟು ಹದಗೆಡಿಸುತ್ತವೆ ಹಾಗೂ 2015ರ ಪರಮಾಣು ಒಪ್ಪಂದವನ್ನು ಉಲ್ಲಂಘಿಸುತ್ತವೆ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝರೀಫ್ ಹೇಳಿದ್ದಾರೆ.
ಇರಾನ್ ವಿರುದ್ಧ ಅಮೆರಿಕ ಮಂಗಳವಾರ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸಿದ ಬಳಿಕ ಝರೀಫ್ ಈ ಹೇಳಿಕೆ ನೀಡಿದ್ದಾರೆ.
ಆರು ದೇಶಗಳೊಂದಿಗೆ ಇರಾನ್ ಮಾಡಿಕೊಂಡಿರುವ 2015ರ ಪರಮಾಣು ಒಪ್ಪಂದವನ್ನು ಟೆಹರಾನ್ ಪಾಲಿಸುತ್ತಿದೆ ಎಂಬುದಾಗಿ ಅಮೆರಿಕ ಇದಕ್ಕೂ ಒಂದು ದಿನ ಮುಂಚೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಇರಾನ್‌ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮಕ್ಕೆ ಸಂಬಂಧಿಸಿ ಆ ದೇಶದ ವಿರುದ್ಧ ನೂತನ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುತ್ತಿರುವುದಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್ ಸರಕಾರ ಹೇಳಿದೆ ಎಂದು ‘ಪ್ರೆಸ್ ಟಿವಿ’ ವರದಿ ಮಾಡಿದೆ.
‘‘ದಿಗ್ಬಂಧನವು ಒಪ್ಪಂದದ ಆಶಯವನ್ನು ಉಲ್ಲಂಘಿಸಿದೆ. ಅದು ಒಪ್ಪಂದದ ಶರತ್ತುಗಳನ್ನು ಉಲ್ಲಂಘಿಸಿದೆಯೇ ಎನ್ನುವುದನ್ನು ನಾವು ನೋಡುತ್ತೇವೆ ಹಾಗೂ ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ’’ ಎಂದು ಝರೀಫ್ ನುಡಿದರು.
ನೂತನ ದಿಗ್ಬಂಧನಗಳ ಮೂಲಕ ಅಮೆರಿಕವು ಅಂತಾರಾಷ್ಟ್ರೀಯ ವಾತಾವರಣವನ್ನು ಕಲುಷಿತಗೊಳಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.