×
Ad

ಬಂಟ್ವಾಳ ಕ್ಷೇತ್ರಕ್ಕೆ ಗರಿಷ್ಠ ಪ್ರಯೋಜನ: ರಮಾನಾಥ ರೈ

Update: 2017-07-19 22:33 IST

ಬಂಟ್ವಾಳ, ಜು.19: ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಹಲವು ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಪ್ರಯೋಜನಕಾರಿ ಕೆಲಸಗಳು ನಡೆದಿವೆ. ಬಹುಗ್ರಾಮ ಕುಡಿಯುವ ನೀರು, ರಸ್ತೆಗಳು, ಬಸ್ ನಿಲ್ದಾಣ, ಸಮುದಾಯ ಭವನ ಇವುಗಳಲ್ಲಿ ಸೇರಿವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನರಿಕೊಂಬು ಗ್ರಾಮದ ಬಿಜೆಪಿಯಲ್ಲಿದ್ದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಟ್ಟು 135 ಕೋಟಿ ರೂ.ಗಳು ವೆಚ್ಚವಾಗಲಿದ್ದು, ನರಿಕೊಂಬು ಶಂಭೂರು ಯೋಜನೆಗೆ ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಲಿದೆ. ಪುಚ್ಚೇರಿ ಮತ್ತು ಮೂಲಾರ್‌ಪಟ್ನ ಮಧ್ಯೆ ಅಣೆಕಟ್ಟು ನಿರ್ಮಿಸುವ ಯೋಚನೆ ಇದೆ. ಕಡೇಶ್ವಾಲ್ಯ ಸೌಹಾರ್ದ ಸೇತುವೆ ನಿರ್ಮಾಣ ಕೆಲಸಕ್ಕೆ ಚಾಲನೆ ದೊರಕಿದೆ. ಬಂಟ್ವಾಳ ಬಳಿಯೂ ಸೇತುವೆ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದೆ. 94 ಸಿಸಿಯಡಿ ಹಕ್ಕುಪತ್ರ ನೀಡಲಾಗುತ್ತಿದೆ. ಅದಕ್ಕೆ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಡಿ ಹಲವು ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ. ಐಬಿ ಬಳಿ ಮತ್ತೊಂದು ಪಾರ್ಕ್, ಬಂಟ್ವಾಳದಲ್ಲಿ ಪಂಜೆ ಭವನ, ಬಿ.ಸಿ.ರೋಡಿನಲ್ಲಿ ಬಸ್ ನಿಲ್ದಾಣ, ಮೆಸ್ಕಾಂ ಭವನ ಹಾಗೂ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಪ್ರಗತಿಯಲ್ಲಿದೆ. ರಾಜ್ಯ ಸರಕಾರ ಹಲವು ಯೋಜನೆಗಳನ್ನು ಜನರಿಗಾಗಿ ಒದಗಿಸಿದ್ದು, ಅರಣ್ಯ ಇಲಾಖೆ ಮೂಲಕವೂ ಗ್ಯಾಸ್ ಕಿಟ್ ವಿತರಿಸಲಾಗಿದೆ ಎಂದು ಸಚಿವ ರೈ ಹೇಳಿದರು.

ಸುಳ್ಳು ಸುದ್ದಿ ಹರಡಿಸಬೇಡಿ: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿಗಳನ್ನು ಹರಡಿಸುವ ಕೆಲಸವನ್ನು ಯುವಜನಾಂಗ ಮಾಡುವುದು ಬೇಡ. ನಮ್ಮ ಪಕ್ಷ ಯಾವ ಕೋಮು, ಜಾತಿಯ ಪರವಾಗಿಯೂ ಅಲ್ಲ. ಎಲ್ಲ ರೀತಿಯ ಕೋಮುವಾದವನ್ನು ನಾನು ವಿರೋಧಿಸುತ್ತೇನೆ ಎಂದ ರೈ, ಸುಳ್ಳು ಜ್ವಾಲಾಮುಖಿಯಂತೆ, ಬೇಗನೆ ಹರಡುತ್ತದೆ. ಆದರೆ ಸತ್ಯಕ್ಕೇ ಕೊನೆಗೆ ಜಯವಾಗುತ್ತದೆ ಎಂದರು.

ಪಕ್ಷಕ್ಕೆ ಸೇರ್ಪಡೆ: ಈ ಸಂದರ್ಭ ನರಿಕೊಂಬು ಗ್ರಾಮದ ಬಿಜೆಪಿಯಲ್ಲಿದ್ದ ಎರಡು ಬಾರಿ ಪಂಚಾಯತ್ ಸದಸ್ಯೆ ಹಾಗೂ ಈಗಿನ ಗ್ರಾಪಂ ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಗ್ರಾಪಂ ಸದಸ್ಯ ಹಾಗೂ ಬಿಜೆಪಿಯ ಸ್ಥಳೀಯ ಸಮಿತಿ ಮಾಜಿ ಅಧ್ಯಕ್ಷ ಮಾಧವ ಪೂಜಾರಿ ಕರ್ಬೆಟ್ಟು, ಚೇತನ್ ಪೂಜಾರಿ ಬೋಳಂತೂರು, ಹೂವಪ್ಪ ಪೂಜಾರಿ, ರಾಜೇಶ್ ಪೂಜಾರಿ, ವಸಂತ ಸಪಲ್ಯ, ಪ್ರಮೀಳಾ ವಸಂತ, ಸತೀಶ್ ಪೂಜಾರಿ ಹೊಸಮನೆ, ಭರತ್ ರಾಜ್ ಸಪಲ್ಯ, ಹೇಮಾವತಿ ಯೋಗೀಶ್ ಕಲ್ಯಾರು, ಶ್ರೀನಾಥ್ ಪೂಜಾರಿಹೊಸಮನೆ, ಸಾವಿತ್ರಿ ತಿಮ್ಮಪ್ಪ ಪೂಜಾರಿ, ಅಜಯ್ ಪೂಜಾರಿ ಕರ್ಬೆಟ್ಟು, ವಿಲ್ಫ್ರೆಡ್ ಬರ್ಬೊಜ, ದೇಜಪ್ಪ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯುಸ್ ಎಲ್. ರೋಡ್ರಿಗಸ್, ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಗಳಾದ ಎಂ.ಎಸ್.ಮುಹಮ್ಮದ್, ಮಮತ ಗಟ್ಟಿ, ಜಿಪಂ ಸದಸ್ಯರಾದ ಮಂಜುಳಾ ಮಾವೆ, ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪಕ್ಷದ ಪ್ರಮುಖರಾದ ಜನಾರ್ದನ ಚಂಡ್ತಿಮಾರ್, ಮಾಧವ ಮಾವೆ, ಆಲ್ಫೋನ್ಸ್ ಮಿನೇಜಸ್, ನರಿಕೊಂಬು ವಲಯ ಅಧ್ಯಕ್ಷ ಉಮೇಶ್ ಬೋಳಂತೂರು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News