ಮಣಿಪುರ: ಉರುಳಿಗೆ ಸಿಲುಕಿದ ಚಿರತೆಯ ರಕ್ಷಣೆ
ಉಡುಪಿ, ಜು.19: ಬೇಟೆಗಾಗಿ ನಾಡಿಗೆ ಬಂದು ಉರುಳಿಗೆ ಅಥವಾ ತಡೆಬೇಲಿಯಂಥ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ಘಟನೆ ಮಣಿಪುರ ಗ್ರಾಮದ ಅಂಜಾರುಕಟ್ಟೆಯ ಹಾಡಿಯಲ್ಲಿ ಇಂದು ಅಪರಾಹ್ನ ನಡೆದಿದೆ.
ಅಂಜಾರುಕಟ್ಟೆಯ ಅದಮಾರು ಮಠಕ್ಕೆ ಸೇರಿದ ಜಾಗದಲ್ಲಿದ್ದ ಹಾಡಿಯಲ್ಲಿ ಬೇಟೆಯನ್ನರಸುತ್ತಾ ಬಂದ ಚಿರತೆ ನಿನ್ನೆ ಸಂಜೆ ಅಥವಾ ರಾತ್ರಿ ವೇಳೆ ಈ ಉರುಳಿಗೆ ಸಿಕ್ಕಿಹಾಕಿಕೊಂಡಿರಬೇಕೆಂದು ಊಹಿಸಲಾಗಿದೆ.
ಜನಸಂಚಾರವಿರದ ಪ್ರದೇಶವಾದ ಕಾರಣ, ತಕ್ಷಣಕ್ಕೆ ಅದು ಜನರ ಗಮನಕ್ಕೆ ಬಂದಿರಲಿಲ್ಲ. ಇಂದು ಅಪರಾಹ್ನ 12 ಗಂಟೆ ಸುಮಾರಿಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯ ಸಿಬ್ಬಂದಿಗಳು ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ನೇತೃತ್ವದಲ್ಲಿ ಬೋನು ಹಾಗೂ ಬಲೆಗಳೊಂದಿಗೆ ಸ್ಥಳಕ್ಕೆ ಧಾವಿಸಿ ಚಿರತೆಯನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರು.
3-4 ವರ್ಷ ಪ್ರಾಯದ ಗಂಡು ಚಿರತೆಯನ್ನು ರಕ್ಷಿಸುವ ಹಾಗೂ ಚಿರತೆಯ ಆಕ್ರಮಣದಿಂದ ಜನರನ್ನು ರಕ್ಷಿಸುವುದಕ್ಕಾಗಿ ತಕ್ಷಣವೇ ಅರವಳಿಕೆ ತಜ್ಞರನ್ನು ಸ್ಥಳಕ್ಕೆ ಕರೆಸಲಾಯಿತು. ಅರವಳಿಕೆ ತಜ್ಞರು ಬಂದು ಚುಚ್ಚುಮದ್ದು ನೀಡಿದಾಗ ಪ್ರಜ್ಞೆ ಕಳೆದುಕೊಂಡ ಚಿರತೆಯನ್ನು ಸಂಜೆ 5 ಗಂಟೆಯ ಸುಮಾರಿಗೆ ಉರುಳಿನಿಂದ ಬಿಡಿಸಿ ರಕ್ಷಿಸಲಾಯಿತು.
ಉರುಳಿನಿಂದ ಬಿಡಿಸಿಕೊಳ್ಳಲು ನಡೆಸಿದ ಸೆಣಸಾಟದಿಂದ ಗಾಯಗೊಂಡ ಚಿರತೆಯನ್ನು ಬೋನಿಗೆ ಹಾಕಿಕೊಂಡು ಆದಿ ಉಡುಪಿಯಲ್ಲಿರುವ ಇಲಾಖೆಯ ಕಚೇರಿಗೆ ತರಲಾಗಿದೆ. ವೈದ್ಯರು ಅದಕ್ಕೆ ಚಿಕಿತ್ಸೆ ನೀಡುತಿದ್ದು, ಚೇತರಿಸಿಕೊಳ್ಳುತ್ತಿದೆ. ಸಂಪೂರ್ಣ ಚೇತರಿಸಿಕೊಂಡ ಬಳಿಕ ಚಿರತೆಯನ್ನು ರಕ್ಷಿತಾರಣ್ಯದಲ್ಲಿ ಬಿಡಲಾಗುವುದು ಎಂದು ಲೆಬೊ ಅವರು ಪತ್ರಿಕೆಗೆ ತಿಳಿಸಿದರು.
ಚಿರತೆಯನ್ನು ವೀಕ್ಷಿಸಲು 200ಕ್ಕೂ ಅಧಿಕ ಮಂದಿ ಕುತೂಹಲಿಗರು ನೆರೆದಿದ್ದು ಇದರಿಂದ ಕಾರ್ಯಾಚರಣೆಯನ್ನು ಎಚ್ಚರಿಕೆಯಿಂದ, ಮುಂಜಾಗ್ರತಾ ಕ್ರಮ ಗಳೊಂದಿಗೆ ನಡೆಸಲಾಯಿತು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.