×
Ad

ಪೌರಾಯುಕ್ತರು, ಮೆಸ್ಕಾಂ ಅಧಿಕಾರಿಗಳ ವಿರುದ್ದ ದೂರು

Update: 2017-07-19 22:41 IST

ಪುತ್ತೂರು, ಜು.19: ಪುತ್ತೂರು ನಗರಸಭೆಯ ವ್ಯಾಪ್ತಿಯ ಬಲ್ನಾಡು ಗ್ರಾಮದಲ್ಲಿ ಕೆಲವರಿಗೆ ಸ್ವಯಂ ಘೋಷಣಾ ಆಸ್ತಿ ತೆರಿಗೆಯನ್ನು ಪೌರಾಯುಕ್ತರ ಯಾವುದೇ ಸಹಿ ಬಳಸದೆ ಅಕ್ರಮವಾಗಿ ನೀಡಲಾಗಿದ್ದು, ಈ ಆಧಾರದ ಮೇಲೆ ಮೆಸ್ಕಾಂ ಅಧಿಕಾರಿಗಳು ಆ ಮನೆಗಳಿಗೆ ವಿದ್ಯುತ್ ಸಮಪರ್ಕ ನೀಡಿರುವುದು ಕೂಡ ಅಕ್ರಮವಾಗಿದೆ ಎಂದು ಆರೋಪಿಸಿ ಮತ್ತು ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಬಲ್ನಾಡಿನ ಮಹಿಳೆಯೊಬ್ಬರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಪುತ್ತೂರು ನಗರ ಸಭೆಯ ವ್ಯಾಪ್ತಿಯ ಬಲ್ನಾಡು ಗ್ರಾಮದ ಸುಂಕಮೂಲೆ ನಿವಾಸಿ ಧನಂಜಯ ಅವರ ಪತ್ನಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು, ಸುಂಕಮೂಲೆ ಎಂಬಲ್ಲಿ ದೇವದಾಸ ಅವರ ಪತ್ನಿ ವಾರಿಜ, ಬಶೀರ್ ಅವರ ಪತ್ನಿ ಅಮೀನಾ, ಚಂದ್ರಶೇಖರ್ ಅವರ ಪತ್ನಿ ಗೀತಾ, ಶಬೀರ್ ಅವರ ಪತ್ನಿ ಕೈರು, ಗಣಪತಿ ಪೈ ಅವರ ಪತ್ನಿ ಸವಿತಾ, ಶಿವಪ್ಪ ನಾಯ್ಕ ಅವರ ಪತ್ನಿ ರೇವತಿ ಎಂಬವರಿಗೆ ಅಕ್ರಮವಾಗಿ ಸ್ವಯಂ ಘೋಷಿತ ಆಸ್ತಿತೆರಿಗೆಯನ್ನು ಪೌರಾಯುಕ್ತರ ಸಹಿ ಬಳಸದೆ ನೀಡಲಾಗಿದೆ. ಇದರ ಆಧಾರದಲ್ಲಿ ಮೆಸ್ಕಾಂ ಅಧಿಕಾರಿಗಳು ಈ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದು ಕೂಡ ಅಕ್ರವಾಗಿದ್ದು, ಈ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯಿದೆಯಡಿ ನಗರಸಭೆಯಿಂದ ಪಡೆಯಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ತನಿಖೆ ನಡೆಸಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ನೀಡಿರುವವರೊಂದಿಗೆ ಅಧಿಕಾರಿಗಳು ಶಾಮೀಲಾಗಿ ತನಿಖೆ ನಡೆಸದಿರುವ ಮತ್ತು ನಗರಸಭೆಯ ಅಧಿಕಾರಿಗಳ ಕುಮ್ಮಕ್ಕಿನಿಂದ ಇಂತಹ ಹಲವಾರು ಕುಟುಂಬಗಳಿಗೆ ಅಕ್ರಮ ಡೋರ್ ನಂಬ್ರ ನೀಡಿರುವ ಸಾಧ್ಯತೆ ಇದೆ. ಇವರೊಂದಿಗೆ ನಗರಸಭೆಯ ಕೆಲವು ಸದಸ್ಯರೂ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವ ಅವರು ಪೌರಾಯುಕ್ತರು, ಸಹಾಯಕ ಪೌರಾಯುಕ್ತರು, ಪುತ್ತೂರಿನ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಮತ್ತು ನಕಲಿ ಸ್ವಯಂ ಘೋಷಣಾ ಆಸ್ತಿ ತೆರಿಗೆ ನೀಡಿರುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News