ಜಿಪಂ ಕ್ರಿಯಾ ಯೋಜನೆ, ಪ್ರಗತಿ ಪರಿಶೀಲನೆ ಸಭೆ
ಉಡುಪಿ, ಜು.19: ಉಡುಪಿ ಜಿಪಂನ 2017-18ನೇ ಸಾಲಿನ ಕ್ರಿಯಾ ಯೋಜನೆ ಹಾಗೂ ಪ್ರಗತಿ ಪರಿಶೀಲನಾ ಸಭೆಯು ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಉಡುಪಿ ಜಿಲ್ಲೆಗೆ ಗ್ರಾಮೀಣ ಕುಡಿಯುವ ನೀರಿಗೆ ಸುಮಾರು 12 ಕೋಟಿ ರೂ. ಅನುದಾನ ಬಂದಿದ್ದು, ಇದು ಬಹಳ ಕಡಿಮೆ ಅನುದಾನವಾಗಿದೆ. ಕಳೆದ ಸಾಲಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಮುಂದುವರಿಸಲು ಇದರಿಂದ ಸಾಧ್ಯವಾಗುವು ದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕಷ್ಟವಾಗುವುದು. ರಾಜ್ಯ ಸರಕಾರ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಜಿಲ್ಲೆಯ ಅಭಿವೃದ್ದಿ ಕುಂಠಿತಗೊಂಡಿದೆ ಎಂದು ಅಧ್ಯಕ್ಷ ದಿನಕರ ಬಾಬು ಹೇಳಿದರು.
ಇಲಾಖಾಧಿಕಾರಿಗಳು 2017-18ನೇ ಸಾಲಿನ ಕ್ರಿಯಾ ಯೋಜನೆ, ತೆಗೆದು ಕೊಳ್ಳುವ ಕಾಮಗಾರಿಗಳ ಪಟ್ಟಿ , ಪೂರ್ಣಗೊಳಿಸಿ ಕೈಬಿಡಲಾದ ಕಾಮಗಾರಿಗಳ ಪಟ್ಟಿ, ಪ್ರಾರಂಭಿಸದೆ ಇರುವ ಕಾಮಗಾರಿಗಳ ಪಟ್ಟಿ, ಇತರೆ ಸಮಸ್ಯೆಗಳಿಂದ ಕೈಬಿಡಲಾದ ಕಾಮಗಾರಿಗಳ ಪಟ್ಟಿ ಇತ್ಯಾದಿ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನೀಡದೆ ಇದ್ದುದರಿಂದ ಅಸಮಾಧಾನ ಗೊಂಡ ಅಧ್ಯಕ್ಷರು ಸಭೆಯನ್ನು ಜು.28ಕ್ಕೆ ಮರುನಿಗದಿಗೊಳಿಸಿ, ಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ಆದೇಶಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಸ್ಥಾಯಿ ಸಮಿತಿ ಅದ್ಯಕ್ಷರಾದ ಕೆ.ಬಾಬು ಹೆಗ್ಡೆ, ಉದಯ ಎಸ್. ಕೋಟ್ಯಾನ್, ಶಶಿಕಾಂತ ಪಡುಬಿದ್ರಿ, ಜಿಪಂ ಮುಖ್ಯ ಯೋಜನಾಧಿಕಾರಿ ಎ.ಶ್ರೀನಿವಾಸ ರಾವ್, ಕಾರ್ಯನಿರ್ವಾಹಕ ಇಂಜಿನಿಯರು ಎ.ರಾಜ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು ಸಭೆಯಲ್ಲಿ ಉಪಸ್ಥಿತರಿದ್ದರು.