×
Ad

ಕರಾವಳಿ ಸಂಸ್ಕೃತಿ, ಕಲಾ ಪ್ರಕಾರಗಳ ಕುರಿತು ವಿಚಾರ ಸಂಕಿರಣ

Update: 2017-07-19 23:09 IST

ಮಣಿಪಾಲ, ಜು.19: ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ಐಸಿಎಚ್‌ಆರ್)ನ ಪ್ರಾಯೋಜಕತ್ವದಲ್ಲಿ ಮಣಿಪಾಲ ವಿವಿಯ ಸೆಂಟರ್ ಫಾರ್ ಕ್ರಿಯೇಟಿವ್ ಎಂಡ್ ಕಲ್ಚರಲ್ ಸ್ಟಡೀಸ್ ‘ಭಾರತೀಯ ಕಲೆ ಮತ್ತು ಕಲಾ ಇತಿಹಾಸ: ಕರಾವಳಿ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಹಾಗೂ ಚಿತ್ರಕಲಾ ಪ್ರದರ್ಶನವೊಂದನ್ನು ಜು.22 ಮತ್ತು 23ರಂದು ಮಣಿಪಾಲದಲ್ಲಿ ಆಯೋಜಿಸಿದೆ ಎಂದು ವಿಚಾರಸಂಕಿರಣದ ಸಂಘಟಕ ಡಾ.ಉನ್ನಿಕೃಷ್ಣನ್ ಕೆ. ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎರಡು ದಿನಗಳ ವಿಚಾರಸಂಕಿರಣವು ಮಣಿಪಾಲ ಕೆಎಂಸಿಯ ಬೇಸಿಕ್ ಸಾಯನ್ಸ್ ಕಟ್ಟಡದ ಇಂಟರಾಕ್ಟ್ ಹಾಲ್‌ನಲ್ಲಿ ನಡೆಯಲಿದೆ ಎಂದರು.

ಹಂಪಿ ಕನ್ನಡ ವಿವಿಯ ಮಾಜಿ ಕುಲಪತಿಗಳಾದ, ಖ್ಯಾತ ಜಾನಪದ ಮತ್ತು ತುಳು ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಅವರು ಬೆಳಗ್ಗೆ 9:30ಕ್ಕೆ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಮಣಿಪಾಲ ವಿವಿಯ ಪ್ರೊ.ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಚಾರಸಂಕಿರಣಕ್ಕಾಗಿ ಯಕ್ಷಗಾನ, ಲಲಿತಕಲೆ, ಜಾನಪದ, ಸಂಗೀತ, ನೃತ್ಯ, ಕಲಾ ಇತಿಹಾಸ ಸೇರಿದಂತೆ ವಿವಿಧ ರಂಗಗಳ ಹಿರಿಯ ವಿದ್ವಾಂಸರಿಂದ ಸಂಶೋಧನಾ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. ಒಟ್ಟು 14 ಮಂದಿ ಹಿರಿಯ ವಿದ್ವಾಂಸರು ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಲಿದ್ದಾರೆ ಎಂದು ಡಾ.ಉನ್ನಿಕೃಷ್ಣನ್ ತಿಳಿಸಿದರು.

ಯಕ್ಷಗಾನದ ಕುರಿತಂತೆ ಡಾ. ಪ್ರಭಾಕರ ಜೋಶಿ, ಪ್ರೊ.ಎಂ.ಎಲ್. ಸಾಮಗ, ಡಾ. ರಾಘವ ನಂಬಿಯಾ, ಜಾನಪದ ಕ್ಷೇತ್ರದ ಕುರಿತಂತೆ ಡಾ. ಅಶೋಕ್ ಆಳ್ವ, ಡಾ. ಎಸ್. ಎ. ಕೃಷ್ಣಯ್ಯ, ಶರಿತ ಹೆಗ್ಡೆ, ನೃತ್ಯ ಕಲೆಯ ಕುರಿತು ಭ್ರಮರಿ ಶಿವಪ್ರಕಾಶ್, ಭಿತ್ತಿ ಚಿತ್ರಕಲೆಯ ಕುರಿತು ಜನಾರ್ದನ್ ರಾವ್ ಹಾವಂಜೆ, ದೃಶ್ಯ ಕಲೆ ಮತ್ತು ಕಲಾ ಇತಿಹಾಸದ ಕುರಿತಂತೆ ಪ್ರೊ. ಚೂಡಾಮಣಿ ನಂದಗೋಪಾಲ್, ಪ್ರೊ. ರಾಘವೇಂದ್ರ ಕುಲಕರ್ಣಿ, ಪ್ರೊ. ರಮೇಶ್‌ಚಂದ್ರ, ಪ್ರೊ. ಅನಿಲ್ ಕುಮಾರ್ ಹಾಗೂ ಸಂಗೀತ ಕ್ಷೇತ್ರದ ಕುರಿತಂತೆ ಡಾ.ರಂಗ ಪೈ, ಪ್ರೊ. ಅವರಿಂದ ಹೆಬ್ಬಾರ್ ಅವರು ವಿಚಾರಗಳನ್ನು ಮಂಡಿಸಲಿದ್ದಾರೆ ಎಂದರು.

ಮಣಿಪಾಲ ವಿವಿಯ ಕುಲಪತಿಗಳಾದ ಡಾ.ಎಚ್.ವಿನೋದ್ ಭಟ್, ಸೆಂಟರ್ ಫಾರ್ ಗಾಂಧಿಯನ್ ಅಂಡ್ ಫೀಸ್ ಸ್ಟಡೀಸ್‌ನ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ವಿಚಾರಸಂಕಿರಣದಲ್ಲಿ ಉಪಸ್ಥಿತರಿರುವರು ಎಂದು ಡಾ.ಉನ್ನಿಕೃಷ್ಣನ್ ತಿಳಿಸಿದರು.
ಇದರೊಂದಿಗೆ ಕರಾವಳಿಯ 4-5ಮಂದಿ ಹಿರಿಯ ಚಿತ್ರಕಲಾವಿದರ ಅಪರೂಪದ ಕಲಾಕೃತಿಗಳ ಪ್ರದರ್ಶನವೂ ನಡೆಯಲಿದೆ. ಭಾರತೀಯ ಕಲೆ ಮತ್ತು ಕಲಾ ಇತಿಹಾಸದ ಹಿನ್ನೆಲೆಯಲ್ಲಿ ಕರಾವಳಿಯ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳಲ್ಲಾದ ಬದಲಾವಣೆಗಳನ್ನು ವಿಮರ್ಶಿಸುವ ಈ ವಿಚಾರಸಂಕಿರಣಕ್ಕೆ ನಾಡಿನ ಎಲ್ಲಾ ಕಲಾಪ್ರೇಮಿಗಳಿಗೆ ಕಲಾಭಿಮಾನಿಗಳಿಗೆ ಮುಕ್ತ ಅವಕಾಶವಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News