ಅಸ್ತಿತ್ವಕ್ಕಾಗಿ ಶೋಭಾ ಬೇಕಾಬಿಟ್ಟಿ ಹೇಳಿಕೆ: ಯು.ಟಿ. ಖಾದರ್ ಲೇವಡಿ
ಮಂಗಳೂರು, ಜು.20: ಸಂಸದೆ ಶೋಭಾ ಕರಂದ್ಲಾಜೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಲೇವಡಿ ಮಾಡಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳು ಯಾವುದೇ ಹೇಳಿಕೆ, ಮಾಹಿತಿ ಬಹಿರಂಗಪಡಿಸುವಾಗ ಆ ಬಗ್ಗೆ ಅರಿತುಕೊಳ್ಳಬೇಕು. ಆದರೆ, ಶೋಭಾ ಕರಂದ್ಲಾಜೆಯ ಹೇಳಿಕೆಯು ಬೇಜವಾಬ್ದಾರಿ, ಅಜ್ಞಾನದಿಂದ ಕೂಡಿದೆ. ಸಂಸದರಾಗಿ ಅವರು ಕಾನೂನಿನ ಅರಿವು ಪಡೆಯಬೇಕಾದುದು ಅತ್ಯಗತ್ಯ. ಗೊತ್ತಿಲ್ಲದಿದ್ದರೆ ಇನ್ನೊಬ್ಬರಿಂದ ಕೇಳಿ ತಿಳಿದುಕೊಳ್ಳಬೇಕು. ಶೋಭಾ ಅದ್ಯಾವುದನ್ನೂ ಮಾಡದೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದರು.
ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯ ಅಸಹಜ ಸಾವಿನ ಸಂದರ್ಭವೂ ಶೋಭಾ ಸಹಿತ ಬಿಜೆಪಿಗರು ಬೇಕಾಬಿಟ್ಟಿ ಆರೋಪ ಸುರಿಸಿದರು. ಆದರೆ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರೇ ಇದರ ಬಗ್ಗೆ ಸೊಲ್ಲೆತ್ತಲಿಲ್ಲ. ಹೀಗೆ ಅಸ್ತಿತ್ವ ಕಳಕೊಂಡಿರುವ ಶೋಭಾ ಶರತ್ ಹತ್ಯೆಯನ್ನು ಎನ್‌ಐಎಗೆ ಕೊಡಿ ಎನ್ನುತ್ತಾರೆ. ಎನ್‌ಐಎಗೆ ಯಾವುದನ್ನು ಕೊಡಬೇಕು ಮತ್ತು ಕೊಡಬಾರದು ಎಂಬ ಕನಿಷ್ಠ ಜ್ಞಾನ ಸಂಸದೆಯಾದ ಶೋಭಾರಿಗೆ ಇಲ್ಲವೇ ಎಂದು ಖಾದರ್ ಪ್ರಶ್ನಿಸಿದರು.
ಶರತ್ ಪ್ರಕರಣವಲ್ಲದೆ ಅಶ್ರಫ್ ಕಲಾಯಿ, ಹರೀಶ್ ಪೂಜಾರಿ, ವಿನಾಯಕ ಬಾಳಿಗಾ, ಪ್ರವೀಣ್ ಪೂಜಾರಿ ಹತ್ಯೆಯ ಬಗ್ಗೆ ಶೋಭಾ ಯಾಕೆ ಮಾತನಾಡುತ್ತಿಲ್ಲ. ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಕೊಲೆಯಲ್ಲಿ ಭಯೋತ್ಪಾದಕರ ಪಾತ್ರ ಇದೆ ಎಂಬ ಮಾಹಿತಿ ಬಂದ ತಕ್ಷಣ ರಾಜ್ಯ ಸರಕಾರ ಯಾರದೇ ಬೇಡಿಕೆಗೆ ಕಾಯದೆ ಸ್ವಯಂ ಆಗಿ ಎನ್‌ಐಎ ತನಿಖೆಗೆ ಒಪ್ಪಿಸಿದೆ ಎಂಬುದನ್ನು ಶೋಭಾ ಕರಂದ್ಲಾಜೆ ತಿಳಿದುಕೊಳ್ಳಬೇಕು ಎಂದರು ಖಾದರ್ ಹೇಳಿದರು.
ಇತ್ತೀಚೆಗೆ ಕೇಂದ್ರ ಗೃಹ ಸಚಿವರಿಗೆ ನೀಡಿದ ಕೊಲೆಗಳ ಕುರಿತಾದ ಪಟ್ಟಿಯ ಬಗ್ಗೆ ಉಲ್ಲೇಖಿಸಿದ ಖಾದರ್, ಶೋಭಾ ಆತ್ಮಾವಲೋಕನ ಮಾಡಲಿ, ಸಂವಿಧಾನ ತಿಳಿದುಕೊಳ್ಳಲಿ ಎಂದರಲ್ಲದೆ, ಬಿಜೆಪಿಗರು ವಿಚಾರಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಾಗ ತರಾತುರಿ ಮಾಡುತ್ತಾರೆ. ಆ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ, ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಕೊಲೆ ಕೃತ್ಯಗಳ ನೈಜ ಆರೋಪಿಗಳ ಪತ್ತೆಗೆ ಸಹಕರಿಸುವ ಬದಲು ಇಂತಹ ಇಂತಹ ನೀಚ ರಾಜಕೀಯಕ್ಕೆ ಇಳಿಯಬಾರದು ಎಂದರು.