ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ‘ಭಯೋತ್ಪಾದಕ’ ಎಂದು ಕರೆದ ಸಂಸದ ನಳಿನ್ ಕುಮಾರ್!
ಮಂಗಳೂರು, ಜು. 20: ಸಂಸದೆ ಶೋಭಾ ಕರಂದ್ಲಾಜೆ ಗೃಹ ಸಚಿವರಿಗೆ ಕಳುಹಿಸಿಕೊಟ್ಟಿರುವ ಕೊಲೆಯಾಗಿದ್ದಾರೆ ಎನ್ನುವ ಸಂಘಪರಿವಾರ ಕಾರ್ಯಕರ್ತರ ಪಟ್ಟಿಯ ಸತ್ಯಾಂಶ ಬಯಲಾಗಿ, ಬಿಜೆಪಿ ತೀವ್ರ ಮುಜುಗರ ಅನುಭವಿಸುತ್ತಿದೆ. ಇದೀಗ, ಆ ನಕಲಿ ಪಟ್ಟಿಯ ಆಧಾರದಲ್ಲಿ ಬಿಜೆಪಿ ಮುಖಂಡರು ಹೊಸದಿಲ್ಲಿಯ ಸಂಸತ್ ಆವರಣದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಭಯೋತ್ಪಾದಕ’ ಎಂದು ಬಿಜೆಪಿ ಮುಖಂಡರು ಕರೆದಿರುವ ವೀಡಿಯೊ ಕ್ಲಿಪ್ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ.
ಕೆಲವು ದಿನಗಳ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ ಅವರು, ಕೊಲೆಯಾಗಿರುವ ಕೆಲವು ಸಂಘಪರಿವಾರ ಕಾರ್ಯಕರ್ತರ ಪಟ್ಟಿ ಮಾಡಿ, ಈ ಕೊಲೆಗಳನ್ನು ಎನ್‌ಐಎ ತನಿಖೆ ನಡೆಸಬೇಕು ಎಂದು ಕೇಂದ್ರ ಗೃಹ ಸಚಿವರಿಗೆ ಒತ್ತಾಯಿಸಿದ್ದರು. ಆದರೆ ಈ ಪಟ್ಟಿಯಲ್ಲಿರುವ ಕೆಲವರು ಬದುಕಿರುವುದಲ್ಲದೆ ಆತ್ಮಹತ್ಯೆ ಮಾಡಿಕೊಂಡವರ ಹೆಸರುಗಳೂ ಇದರಲ್ಲಿವೆ ಎನ್ನುವುದು ಸಾಕಷ್ಟು ಆಕ್ಷೇಪಕ್ಕೆ ಕಾರಣವಾಗಿ, ಕರಂದ್ಲಾಜೆ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದರು. ಆದರೆ ಇದೇ ಪಟ್ಟಿಯನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ, ನಳಿನ್ ಕುಮಾರ್, ಶೋಭಾ ಕರಂದ್ಲಾಜೆ ಮೊದಲಾದ ಬಿಜೆಪಿ ಸಂಸದರು ದಿಲ್ಲಿಯ ಸಂಸತ್ ಆವರಣದಲ್ಲಿ ಸಿದ್ದರಾಮಯ್ಯ ಸರಕಾರಕ್ಕೆ ಧಿಕ್ಕಾರ ಕೂಗಿದ್ದರು.
ಈ ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಅವರು ‘ಭಯೋತ್ಪಾದಕ ಸಿದ್ದರಾಮಯ್ಯರಿಗೆ ಧಿಕ್ಕಾರ’ ಎಂದು ಕೂಗಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.
ಒಬ್ಬ ಮುಖ್ಯಮಂತ್ರಿಯನ್ನು ‘ಭಯೋತ್ಪಾದಕ’ ಎಂದು ಕರೆಯುವುದು ಎಷ್ಟು ಸರಿ? ಭಯೋತ್ಪಾದನೆ ನಡೆಸಿದ್ದಾರೆ ಎನ್ನುವುದಕ್ಕೆ ಸಂಸದರ ಬಳಿ ಸಾಕ್ಷಿಗಳಿವೆಯೇ? ಎಂಬ ಪ್ರಶ್ನೆಗಳನ್ನು ಬಿಜೆಪಿ ಮುಖಂಡರು ಎದುರಿಸುತ್ತಿದ್ದಾರೆ. ತಪ್ಪು ಮಾಹಿತಿಗಳನ್ನು ಮುಂದಿಟ್ಟುಕೊಂಡು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಭಯೋತ್ಪಾದಕ ಮುಖ್ಯಮಂತ್ರಿ’ ಎಂದು ನಳಿನ್ ಕುಮಾರ್ ಕರೆದಿರುವುದಕ್ಕೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿಯನ್ನು ‘ಭಯೋತ್ಪಾದಕ’ ಎಂದು ನಳಿನ್ ಕುಮಾರ್ ಧಿಕ್ಕಾರ ಕೂಗುತ್ತಿರುವ ವೀಡಿಯೊ ಕ್ಲಿಪ್ ಇಲ್ಲಿದೆ.