ಜೈಲಿನಲ್ಲಿ ಬಾಡೂಟ ಘಟನೆ ಹಳೆಯದಂತೆ: ಐವನ್ ಡಿಸೋಜಾ
ಮಂಗಳೂರು, ಜು. 20: ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಬಾಡೂಟ ನಡೆಸಿದ್ದಾರೆನ್ನಲಾದ ಘಟನೆ ಹಳೆಯದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.
ನಗರದ ಕೇಂದ್ರ ಕಾರಾಗೃಹಕ್ಕೆ ಇಂದು ಭೇಟಿ ನೀಡಿ ಪ್ರಭಾರ ಜೈಲು ಅಧೀಕ್ಷರ ಜತೆ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ನಡೆಸಿದ್ದಾರೆನ್ನಲಾದ ಬಾಡೂಟದ ಬಗ್ಗೆ ನಾನಿಂದು ಜೈಲಿನ ಪ್ರಭಾರ ಅಧೀಕ್ಷರನ್ನು ಪ್ರಶ್ನಿಸಿದ್ದೇನೆ. ಆ ಫೋಟೋದಲ್ಲಿ ಕಾಣಿಸಿಕೊಂಡಿರುವ ಮೂವರು ಕೈದಿಗಳು ಈಗಾಗಲೇ ಇಲ್ಲಿಂದ ಬಿಡುಗಡೆಗೊಂಡಿದ್ದಾರೆ. ಅದು ಯಾವಾಗ ನಡೆದ ಘಟನೆ ಎಂದು ತಮಗೆ ಗೊತ್ತಿಲ್ಲವೆಂದು ಅಧಿಕಾರಿ ತಿಳಿಸಿದ್ದಾರೆ ಎಂದು ಐವನ್ ಡಿಸೋಜಾ ನುಡಿದರು.
ಜೈಲು ನಿಯಮಾವಳಿ ಬಿಟ್ಟು ಕಾರ್ಯಾಚರಿಸದಂತೆ ಸೂಚನೆ
ಜೈಲಿನ ನಿಯಮಾವಳಿಗಳನ್ನು ಬಿಟ್ಟು ಕಾರ್ಯಾಚರಣೆ ಮಾಡದಂತೆ ಭೇಟಿಯ ಸಂದರ್ಭ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆ ಸಂದರ್ಭ ಅಧಿಕಾರಿಗಳು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಜೈಲಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಸಾಮರ್ಥ್ಯಕ್ಕಿಂತ ಅಧಿಕ ವಿಚಾರಣಾಧೀನ ಕೈದಿಗಳು ಹಾಗೂ ಸಿಬ್ಬಂದಿಗಳ ಕೊರತೆಯ ಕುರಿತಂತೆ ಚರ್ಚಿಸಲು ತಾನು ಜೈಲಿಗೆ ಭೇಟಿ ನೀಡಿರುವುದಾಗಿ ಅವರು ಹೇಳಿದರು.
ಹೊಸ ಡಿಜಿ (ಕಾರಾಗೃಹ)ಯಾಗಿ ಎನ್.ಎಸ್. ಮೇಘರಿಕ್‌ರವರು ಅಧಿಕಾರ ಸ್ವೀಕರಿಸಿದ ಬಳಿಕ ಅವರನ್ನು ಭೇಟಿ ಮಾಡಿ ಇಲ್ಲಿನ ಸಿಬ್ಬಂದಿಗಳ ಕೊರತೆಯನ್ನು ಈಗಾಗಲೇ ಗಮನಕ್ಕೆ ತಂದಿದ್ದೇನೆ. 118 ವಿಚಾರಣಾಧೀನ ಕೈದಿಗಳಿರಬೇಕಾದ ಜೈಲಿನಲ್ಲಿ 418 ಮಂದಿ ಕೈದಿಗಳಿದ್ದಾರೆ. ಇದರಿಂದ ಜೈಲಿನಲ್ಲಿ ಘರ್ಷಣೆಗೆ ಕಾರಣವಾಗುತ್ತಿರುವ ಬಗ್ಗೆಯೂ ಅವರಿಗೆ ತಿಳಿಸಲಾಗಿದೆ. ಅವರು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಜೈಲಿನ ಒಳಗೆ ನಿಯಮಾವಳಿಗಳನ್ನು ಬಿಟ್ಟು ಕಾರ್ಯಾಚರಣೆ ಮಾಡುತ್ತಿರುವ ಕುರಿತಂತೆ ಭೇಟಿಯ ವೇಳೆ ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ಅಲ್ಲಿನ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇವೆಲ್ಲವನ್ನೂ ಮುಖ್ಯಮಂತ್ರಿ ಹಾಗೂ ಜೈಲಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಬಾಳೆಪುಣಿ ಬಳಿ ನೂತನ ಕಾರಾಗೃಹ ಕಟ್ಟಡಕ್ಕೆ ನಿವೇಶನ ಗುರುತಿಸಿ ಬೇಲಿ ನಿರ್ಮಾಣಕ್ಕೆ 2 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.
ಜು. 22ರಂದು ಮಂಗಳೂರು ಜೈಲು ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ
ನಗರದ ಕೇಂದ್ರ ಕಾರಾಗೃಹದ ಸಮಸ್ಯೆಗಳ ಕುರಿತಂತೆ ಜು. 22ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ಕಾರಾಗೃಹ ಡಿಜಿಯನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ತಿಳಿಸಿದ್ದಾರೆ.