ಚೀನಾ ವಿರುದ್ಧ ಹೋರಾಡಲು ಭಾರತ ಸಿದ್ಧ: ಸುಷ್ಮಾ ಸ್ವರಾಜ್
ಹೊಸದಿಲ್ಲಿ, ಜು. 20: ಸಿಕ್ಕಿಂನ ಡೋಕ್ ಲಾ ಪ್ರದೇಶದ ಬಿಕ್ಕಟ್ಟಿನ ಬಗ್ಗ್ಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಭಾರತ ತನ್ನನ್ನು ರಕ್ಷಿಸಿಕೊಳ್ಳಲು ಶಸ್ತ್ರಸಜ್ಜಿತವಾಗಿದೆ ಎಂದು ಹೇಳುವ ಮೂಲಕ ಚೀನಾಕ್ಕೆ ಕಟುವಾಗಿ ಎಚ್ಚರಿಕೆ ನೀಡಿದ್ದಾರೆ.
ಡೋಕ್ ಲಾದಿಂದ ಚೀನಾ ತನ್ನ ಸೇನೆಯನ್ನು ಹಿಂದೆ ಕರೆಸಿಕೊಂಡರೆ ಮಾತ್ರ ಗಡಿ ಬಿಕ್ಕಟ್ಟಿನ ಕುರಿತು ದ್ವಿರಾಷ್ಟ್ರ ಮಾತುಕತೆಗೆ ಭಾರತ ಸಿದ್ದ ಎಂದು ಎಂದು ಅವರು ಹೇಳಿದರು.
ಡೋಕ್ ಲಾದಲ್ಲಿರುವ ವಿವಾದಿತ ಪ್ರದೇಶ ತ್ರಿರಾಷ್ಟ್ರಕ್ಕೆ ಸಂಬಂಧಿಸಿದ್ದು (ಚೀನ, ಭಾರತ ಹಾಗೂ ಭೂತಾನ್). ಇಲ್ಲಿನ ಯಥಾಸ್ಥಿತಿಯನ್ನು ಚೀನಾ ಏಕಪಕ್ಷೀಯವಾಗಿ ಬದಲಾಯಿಸಿದರೆ, ಅದು ನಮ್ಮ ಭದ್ರತೆಗೆ ಸವಾಲು ಒಡ್ಡುತ್ತದೆ. ನಾವು ಮಾತುಕತೆಗೆ ಸಿದ್ದ. ಆದರೆ, ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದರು.
ಮೇಲ್ಮನೆಯ ಪ್ರಶ್ನೋತ್ತರ ವೇಳೆಯಲ್ಲಿ ಸಿಕ್ಕಿಂ ಬಿಕ್ಕಟ್ಟಿಗೆ ಕಾರಣವೇನು ಎಂದು ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್‌ವಾಲ್ ಪ್ರಶ್ನಿಸಿದಾಗ ಈ ವಿವರಣೆ ನೀಡಿದ ಸುಷ್ಮಾ ಸ್ವರಾಜ್, ಭಾರತದ ನಿಲುವಿಗೆ ಜಾಗತಿಕ ಸಮುದಾಯ ಬೆಂಬಲ ವ್ಯಕ್ತಪಡಿಸಿದೆ ಎಂದರು.
ಕಳೆದ ಕೆಲವು ವರ್ಷಗಳಿಂದ ಚೀನಾ ಡೋಕ್ ಲಾ ಪ್ರದೇಶದಲ್ಲಿ ಅತಿಕ್ರಮಣದಲ್ಲಿ ತೊಡಗಿಕೊಂಡಿದೆ. ರಸ್ತೆ ದುರಸ್ತಿ, ರಸ್ತೆಗೆ ಟಾರು ಹಾಕುವಂತಹ ಕಾಮಗಾರಿ ನಡೆಸುತ್ತಿದೆ. ಈ ಬಾರಿ ಡೋಕ್ ಲಾ ಪ್ರದೇಶದಲ್ಲಿ ಅತಿಕ್ರಮಣ ನಡೆಸುವ ಉದ್ದೇಶದಿಂದ ಬುಲ್‌ಡೋಜರ್ ಹಾಗೂ ನಿರ್ಮಾಣ ಉಪಕರಣಗಳೊಂದಿಗೆ ಚೀನಾ ಸೇನೆ ಧಾವಿಸಿದೆ ಎಂದು ಅವರು ಹೇಳಿದರು.
ಡೋಕ್ ಲಾ ಪ್ರದೇಶದಲ್ಲಿ ಭಾರತದ ಸೇನೆ ಸರಿಯಾದ ಸ್ಥಾನದಲ್ಲಿದೆ. ಎಲ್ಲ ರಾಷ್ಟ್ರಗಳು ನಮ್ಮ ಬೆಂಬಲಕ್ಕಿವೆ. ಕಾನೂನು ನಮ್ಮಿಂದಿಗಿದೆ ಎಂದು ಅವರು ಹೇಳಿದರು. ಈ ವಿವಾದಾತ್ಮಕ ವಿಷಯದಲ್ಲಿ ದ್ವಿಪಕ್ಷೀಯ ಮಾತುಕತೆಗೆ ಬೀಜಿಂಗ್ ಉತ್ಸುಕವಾಗಿಲ್ಲ ಎಂದು ವರದಿಯಾದ ಒಂದು ಗಂಟೆ ಬಳಿಕ ಸುಷ್ಮಾ ಸ್ವರಾಜ್ ಈ ಹೇಳಿಕೆ ನೀಡಿದ್ದಾರೆ.